ಗೋಕರ್ಣದ ಕೋಟಿ ತೀರ್ಥದಲ್ಲಿ ಬೆಳಗಿದ ಸಹಸ್ರ ದೀಪ

Public TV
1 Min Read

ಕಾರವಾರ: ಕಾರ್ತಿಕ ಮಾಸದ ವಿಶೇಷ ತಿಂಗಳಲ್ಲಿ ಕಾರ್ತಿಕೋತ್ಸವ ಆಚರಣೆ ನಡೆಸಲಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರಸಿದ್ಧ ಗೋಕರ್ಣ ಕ್ಷೇತ್ರದ ಕೋಟಿತೀರ್ಥದ ವಿನಾಯಕ ದೇವಾಲಯದ ಕಾರ್ತಿಕ ದೀಪೋತ್ಸವ ಬುಧವಾರ ನೆರವೇರಿತು.

ಚಂಡೆನಾದ, ವಾದ್ಯಘೋಷದ ನಡುವೆ ಸಾಗುವ ಉತ್ಸವ ಇನ್ನೊಂದೆಡೆ ಹಾಲಕ್ಕು ಒಕ್ಕಲಿಗರ ಗುಮಟೆ ಪಾಂಗ ಜಾನಪದೀಯ ಹಾಡು, ಮೊತ್ತೊಂದೆಡೆ ವಿದ್ಯುತ್ ದೀಪ, ಹಣತೆ ದೀಪದಿಂದ ಕಂಗೊಳಿಸುತ್ತಿರುವ ವಿಶಾಲ ಕೋಟಿತೀರ್ಥ ಮಂದಿರದಲ್ಲಿ ವಿಶೇಷ ಅಲಂಕಾರ ವಿವಿಧ ದೈವ ಕಾರ್ಯ, ಸಾವಿರಾರು ಜನರು ಭಾಗಿ.. ಇದು ಕೋಟಿತೀರ್ಥ ಕಟ್ಟೆಯಲ್ಲಿರುವ ಪಟ್ಟೆ ವಿನಾಯಕ ದೇವಾಲಯದ ಕಾರ್ತಿಕ ದೀಪೋತ್ಸವ ಝಲಕ್.

ಪ್ರತಿ ವರ್ಷದಂತೆ ಕೋಟಿ ತೀರ್ಥಕಟ್ಟೆಯಲ್ಲಿರುವ ಪಟ್ಟೆವಿನಾಯಕ ಮಂದಿರದ 50 ನೇ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ ವಿವಿಧ ದೈವಿಕ ಕಾರ್ಯಕ್ರಮಗಳ ಜರುಗಿ, ಸಂಜೆ ಶ್ರೀದೇವರ ಉತ್ಸವ ನಾಗಬೀದಿ ಮೂಲಕ ಮಹಾಬಲೇಶ್ವರ ಮಂದಿರಕ್ಕೆ ತೆರಳಿ ರಥಬೀದಿ ಮೂಲಕ ಮಂದಿರಕ್ಕೆ ಮರಳಿತು. ನಂತರ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ವೇ.ಚಿಂತಾಮಣ ಶಾಸ್ತಿ ಕೊಡಗಿ ಪೂಜಾ ಕೈಂಕರ್ಯ ನೆರವೇರಿಸಿದರು.

ವೆಂಕಟರಮಣ ಮಂದಿರದಿಂದ ಕೋಟಿತೀರ್ಥಕ್ಕೆ ಬರುವ ಮಾರ್ಗ ಹಾಗೂ ಎಳು ಎಕರೆ ವಿಸ್ತಾರದ ಕೋಟಿತೀರ್ಥ ಕಟ್ಟೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಅಲ್ಲದೇ ಉತ್ಸವ ಬರುವ ವೇಳೆ ಕೋಟಿತೀರ್ಥ ಕಟ್ಟೆಯನ್ನ ಹಣತೆಯಿಂದ ಸಹಸ್ರ ದೀಪ ಬೆಳಗಿಸಲಾಯಿತು.

ಕೋಟಿ ತೀರ್ಥದಲ್ಲಿ ವಾದ್ಯಘೋಷ, ಚಂಡೆನಾದ ಉತ್ಸವಕ್ಕೆ ಮೆರುಗು ತಂದಿತ್ತು. ಉತ್ಸವ ಬರುವ ಮಾರ್ಗದಲ್ಲಿ ರಂಗೋಲಿ ಹಾಕಿ ಮಾವಿನ ತೋರಣದಿಂದ ಸಿಂಗರಿಸಿ ಜನರು ಆರತಿ ನೀಡಿ ವಂದಿಸಿದರು.

Share This Article