ಶಕ್ತಿ ಯೋಜನೆ ಇಕ್ಕಟ್ಟಿನಲ್ಲಿ ಸಾರಿಗೆ ಇಲಾಖೆ – ಮೀಸಲಿಟ್ಟ ಹಣ ಹೈಸ್ಪೀಡ್‌ನಲ್ಲಿ ಖರ್ಚು

Public TV
2 Min Read

ಬೆಂಗಳೂರು: ಸರ್ಕಾರದ ಶಕ್ತಿ ಯೋಜನೆಗೆ (Shakti Scheme) ಮಹಿಳಾ ಮಣಿಗಳು ಬಹುಪರಾಕ್ ಎಂದಿದ್ದು, ಭರ್ಜರಿಯಾಗಿ ಯಶಸ್ವಿಯಾಗಿದೆ. ಶಕ್ತಿ ಯೋಜನೆ ಈಗ ಸಾರಿಗೆ ಇಲಾಖೆಗೆ (Transport Department) ಕೈಸುಡುತ್ತಿದ್ದು ಮೀಸಲಿಟ್ಟ ದುಡ್ಡು ಸಿಕ್ಕಾಪಟ್ಟೆ ಹೈಸ್ಪೀಡ್‌ನಲ್ಲಿ ಖರ್ಚಾಗುತ್ತಿದೆ.

ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ ಈಗಾಗಲೇ ಐದು ತಿಂಗಳು ಕಳೆದಿವೆ. ಜೂನ್ 11ರಿಂದ ಈ ಯೋಜನೆ ಜಾರಿಯಾಗಿದ್ದು, ಸುಮಾರು 90 ಕೋಟಿಗೂ ಹೆಚ್ಚು ನಾರಿಯರು ಉಚಿತವಾಗಿ ರಾಜ್ಯದಲ್ಲಿ ಪ್ರಯಾಣಿಸಿದ್ದಾರೆ.  ಇದನ್ನೂ ಓದಿ: ಮೋಸ್ಟ್‌ ವಾಂಟೆಡ್‌ ಜೈಶ್ ಉಗ್ರ ಪಾಕ್‌ನಲ್ಲಿ ನಿಗೂಢ ಹತ್ಯೆ

ಸಿಎಂ ಸಿದ್ದರಾಮಯ್ಯನವರು (CM Siddaramaiah) ಶಕ್ತಿ ಯೋಜನೆಗೆ ಎಂದು ತಮ್ಮ ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ ಈ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ ಈ ಹಣ ಖಾಲಿಯಾಗುತ್ತಾ ಬಂದಿದೆ.

ಸರ್ಕಾರದ ಅಂದಾಜು ಎಷ್ಟಿತ್ತು?
1 ತಿಂಗಳಿಗೆ ಸರ್ಕಾರದ 311 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿತ್ತು. ಆದರೆ 5 ತಿಂಗಳಿಗೆ (ನವೆಂಬರ್ 12ರವರೆಗೆ) 2,246 ಕೋಟಿ ರೂ. ಖರ್ಚಾಗಿದೆ.

ಉಳಿದ 4 ತಿಂಗಳಿಗೆ ಸರ್ಕಾರದ ಈ ಹಿಂದೆ ನಿಗದಿ ಮಾಡಿದ ಲೆಕ್ಕಾಚಾರದಂತೆ 1,244 ಕೋಟಿ ರೂ. ಹಣ ಬೇಕಾಗುತ್ತದೆ. ಈ ಲೆಕ್ಕ ಪರಿಗಣಿಸಿದರೆ ಒಟ್ಟು 690 ಕೋಟಿ ರೂ. ಹಣ ಕೊರತೆಯಾಗುವ ಸಾಧ್ಯತೆಯಿದೆ. ಪ್ರತಿನಿತ್ಯ 40 ಲಕ್ಷದಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳು ಇರುವುದರಿಂದ ಶಕ್ತಿ ಯೋಜನೆಗೆ ಎಷ್ಟು ಖರ್ಚಾಗಬಹುದು ಎಂಬ ಕುತೂಹಲ ಈಗ ಹೆಚ್ಚಾಗಿದೆ.

 

ಶಕ್ತಿ ಯೋಜನೆಯ ಮೀಸಲಿಟ್ಟ ಹಣ ಖರ್ಚಾಗುತ್ತಿರುವುದಕ್ಕೆ ಪಬ್ಲಿಕ್ ಟಿವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಡಿಸೆಂಬರ್‌ನಲ್ಲಿ ಉಳಿದ ಹಣವನ್ನು ಸರ್ಕಾರ ಕೊಡಲಿದೆ. ಇನ್ನೂ 1 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಿದ್ದಾರೆ.

ಶಕ್ತಿ ಯೋಜನೆ ಜಾರಿಯಾದ ಕೆಲ ತಿಂಗಳುಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಶಕ್ತಿ ಯೋಜನೆಗೆ ಭರ್ಜರಿ ಯಶಸ್ಸು ಕಂಡುಬರುತ್ತಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರ ಮೀರಿ ಹಣ ಖರ್ಚಾಗುತ್ತಿದೆ.

 

Share This Article