ಬರೋಬ್ಬರಿ 1,743 ಕೋಟಿ ಆಸ್ತಿ ಹೊಂದಿರುವ ಶ್ರೀಮಂತ ರಾಜಕಾರಣಿ ಕಣಕ್ಕೆ – ಕೆಜಿಎಫ್‌ ಬಾಬು ಆಸ್ತಿ ಎಷ್ಟಿದೆ?

Public TV
3 Min Read

– ಎಂಟಿಬಿ ದಾಖಲೆ ಮುರಿದ ಯೂಸುಫ್‌ ಷರೀಫ್‌
– ಬಚ್ಚನ್‌ ಅವರಿಂದ ರೋಲ್ಸ್‌ ರಾಯ್ಸ್‌ ಕಾರು ಖರೀದಿ

ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕೋಲಾರದ ಶ್ರೀಮಂತ ಅಭ್ಯರ್ಥಿಯೊಬ್ಬರು ಬೆಂಗಳೂರು ನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

‘ಕೆಜಿಎಫ್‌ ಬಾಬು’ ಎಂದೇ ಪ್ರಸಿದ್ಧಿ ಪಡೆದಿರುವ ಯೂಸೂಫ್‌ ಷರೀಫ್‌ ಅವರು ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಬರೋಬ್ಬರಿ 1,743 ಕೋಟಿ ರೂ. ಆಸ್ತಿ ಘೋಷಣೆ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮತ್ತು ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಜೊತೆಗೂಡಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಇಲ್ಲಿಯವರೆಗೆ ರಾಜ್ಯದ ಚುನಾವಣೆಯ ಇತಿಹಾಸದಲ್ಲಿ ಹೊಸಕೋಟೆ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಂಟಿಬಿ ನಾಗರಾಜ್‌ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದರು. 2019 ರಲ್ಲಿ ನಡೆದ ಉಪಚುನಾವಣೆಯ ವೇಳೆ ಎಂಟಿಬಿ 1200 ಕೋಟಿ ರೂ. ಆಸ್ತಿ ಘೋಷಿಸಿದ್ದರು. ಈಗ ಎಂಟಿಬಿ ಹೆಸರಿನಲ್ಲಿದ್ದ ʼಶ್ರೀಮಂತ ಅಭ್ಯರ್ಥಿʼ ದಾಖಲೆಯನ್ನು ಯೂಸುಫ್‌ ಷರೀಫ್‌ ತಮ್ಮ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ.

ಬಾಲಿವುಡ್‌ ಖ್ಯಾತ ನಟ ಅಮಿತಾಭ್‌ ಬಚ್ಚನ್‌ ಅವರಿಂದ ಯೂಸೂಫ್‌ ರೋಲ್ಸ್‌ ರಾಯ್ಸ್‌ ಕಾರು ಖರೀದಿಸಿದ್ದಾರೆ. ಯೂಸೂಫ್‌ ಷರೀಫ್‌ ಅವರಿಗೆ ತಾಜ್‌ ಅಬ್ದುಲ್‌ ರಜಾಕ್‌, ಶಾಜಿಯಾ ತರನ್ನಮ್‌ ಹೆಸರಿನ ಇಬ್ಬರು ಪತ್ನಿಯರಿದ್ದು, ಐದು ಮಕ್ಕಳನ್ನು ಹೊಂದಿದ್ದಾರೆ. ತಮ್ಮ ಮೇಲೆ ಒಟ್ಟು ನಾಲ್ಕು ಪ್ರಕರಣಗಳಿವೆ ಎಂದು ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಆಸ್ತಿ ಎಷ್ಟಿದೆ?
ಬರೋಬ್ಬರಿ 100 ಕೋಟಿ ರೂ. ಮೌಲ್ಯದ ಚರಾಸ್ಥಿ ಹಾಗೂ 1,643.59 ಕೋಟಿ ರೂ. ಸ್ಥಿರಾಸ್ತಿ (ಒಟ್ಟು 1743 ಕೋಟಿ) ಹೊಂದಿರುವುದಾಗಿ ಬಾಬು ನಾಮಪತ್ರ ವೇಳೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಿಡಿಎನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಮೊನ್ನೆ 300 ಕೋಟಿ, ಇಂದು 200 ಕೋಟಿ ಅಕ್ರಮ

ಕೋಟ್ಯಂತರ ರೂ. ಮೌಲ್ಯದ ಸ್ಥಿರಾಸ್ತಿ:
ಬೆಂಗಳೂರಿನಲ್ಲಿ ನೂರಾರು ಎಕರೆ ಕೃಷಿ ಹಾಗೂ ಕೃಷಿಯೇತರ ಜಮೀನು ಹೊಂದಿರುವ ಯೂಸೂಫ್‌ ಷರೀಫ್‌ ತಮ್ಮ ಹೆಸರಿನಲ್ಲೇ 47.31 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹಾಗೂ ಪತ್ನಿಯ ಹೆಸರಿನಲ್ಲಿ 1.30 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 1,593.27 ಕೋಟಿ ರೂ. ಮೌಲ್ಯದ ಕೃಷಿಯೇತರ ಜಮೀನು, ಬೆಂಗಳೂರಿನಲ್ಲಿ 3.01 ಕೋಟಿ ರೂ. ಮೌಲ್ಯದ ವಸತಿ ಕಟ್ಟಡ ಹೊಂದಿದ್ದು, ಒಟ್ಟು 67.24 ಕೋಟಿ ರೂ. ಸಾಲ ಹೊಂದಿರುವುದಾಗಿ ಪ್ರಮಾಣಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚರಾಸ್ತಿ ಎಷ್ಟಿದೆ?
4.8 ಕೆ.ಜಿ. ಚಿನ್ನಾಭರಣ ಹಾಗೂ 1.10 ಕೋಟಿ ರೂ. ಮೌಲ್ಯದ ವಾಚ್‌ ಸೇರಿದಂತೆ ದುಬಾರಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಕೈಯಲ್ಲಿ 19.53 ಲಕ್ಷ ರೂ. ನಗದು, ಬ್ಯಾಂಕ್‌ಗಳಲ್ಲಿ16.87 ಕೋಟಿ ರೂ. ಠೇವಣಿ, 17.61 ಕೋಟಿ ರೂ.. ಹೂಡಿಕೆ, 58.10 ಕೋಟಿ ರೂ. ವೈಯಕ್ತಿಕ ಸಾಲ ಮಾಡಿದ್ದಾರೆ.  ಇದನ್ನೂ ಓದಿ: ಖಾಸಗಿ ಕ್ರಿಪ್ಟೋ ಕರೆನ್ಸಿ ಸಂಪೂರ್ಣ ನಿಷೇಧ ಮಸೂದೆ ಮಂಡಿಸಲು ಕೇಂದ್ರ ಚಿಂತನೆ

2.01 ಕೋಟಿ ರು. ಮೌಲ್ಯದ ರೋಲ್ಸ್‌ ರಾಯ್ಸ್‌ ಕಾರು ಹಾಗೂ ಇಬ್ಬರು ಪತ್ನಿಯರ ಬಳಿ ತಲಾ 49 ಲಕ್ಷ ರು. ಮೌಲ್ಯದ ಎರಡು ಫಾರ್ಚೂನರ್‌ ಕಾರು ಅಲ್ಲದೇ 100 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಘೋಷಿಸಿದ್ದಾರೆ.

ತಮ್ಮ ಬಳಿ 73 ಲಕ್ಷ ರೂ. ಮೌಲ್ಯದ 1.51 ಕೆ.ಜಿ ಚಿನ್ನಾಭರಣ, ಮೊದಲ ಪತ್ನಿಯ ಬಳಿ 75.89 ಲಕ್ಷ ರೂ. ಮೌಲ್ಯದ 1.56 ಕೆ.ಜಿ. ಚಿನ್ನಾಭರಣ, ಎರಡನೇ ಪತ್ನಿ ಬಳಿ 29.19 ಲಕ್ಷ ರೂ. ಮೌಲ್ಯದ 600 ಗ್ರಾಂ. ಚಿನ್ನ, ಪುತ್ರಿ ಬಳಿ 57.40 ಲಕ್ಷ ರೂ. ಮೌಲ್ಯದ 1.18 ಕೆ.ಜಿ. ಚಿನ್ನ ಇರುವುದಾಗಿ ಉಲ್ಲೇಖಿಸಿದ್ದಾರೆ.

MONEY

ಬಾಂಡ್‌, ಷೇರುಗಳು, ಮ್ಯೂಚುವಲ್‌ ಫಂಡ್‌ಗಳಲ್ಲಿ ಷರೀಫ್ 17.62 ಕೋಟಿ ರೂ. ಹೂಡಿಕೆ ಮಾಡಿದ್ದರೆ, ಮೊದಲ ಪತ್ನಿ 1.60 ಲಕ್ಷ ರೂ., ಎರಡನೇ ಪತ್ನಿ 75 ಸಾವಿರ ಹೂಡಿಕೆ ಮಾಡಿದ್ದಾರೆ. ಐದು ಕನ್‌ಸ್ಟ್ರಕ್ಷನ್‌ ಕಂಪನಿಗಳಲ್ಲಿ ಯೂಸೂಫ್‌ ಷರೀಫ್‌ ಹಣ ಹೂಡಿಕೆ ಮಾಡಿದ್ದು ಒಟ್ಟು 17.61 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *