ಪೆನ್ನಾರ್ ನದಿ ನೀರು ಹಂಚಿಕೆ ನ್ಯಾಯಮಂಡಳಿ ರಚನೆ ಸಾಧ್ಯತೆ

1 Min Read

ನವದೆಹಲಿ: ಕರ್ನಾಟಕ (Karnataka) ಹಾಗೂ ತಮಿಳುನಾಡು (TamilNadu) ನಡುವಿನ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಗಳನ್ನು ಬಗೆಹರಿಸಲು ನ್ಯಾಯಮಂಡಳಿ(Tribunal) ರಚಿಸಲು ಸುಪ್ರೀಂ ಕೋರ್ಟ್ (Supreme Court) ಇಂಗಿತ ವ್ಯಕ್ತಪಡಿಸಿದೆ.

ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್‌ನಾಥ್ ಹಾಗೂ ಎನ್.ವಿ.ಅಂಜಾರಿಯಾ ಪೀಠವು, ವಿವಾದ ಇತ್ಯರ್ಥಪಡಿಸಲು ನ್ಯಾಯಮಂಡಳಿ ರಚಿಸುವುದು ಸೂಕ್ತ. ಆಗ ಉಭಯ ರಾಜ್ಯಗಳು ತಮ್ಮ ವಾದಗಳನ್ನು ಅಲ್ಲಿ ಮಂಡಿಸುತ್ತವೆ ಎಂದು ಅಭಿಪ್ರಾಯಪಟ್ಟಿತು. ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠವು ತೀರ್ಪನ್ನು ಕಾಯ್ದಿರಿಸಿದೆ.  ಇದನ್ನೂ ಓದಿ: ತಮಿಳುನಾಡು SIR ಔಟ್‌ – 97 ಲಕ್ಷ ಮತದಾರರ ಹೆಸರು ಡಿಲೀಟ್‌

 

ದಕ್ಷಿಣ ಪಿನಾಕಿನಿ (Pinakini) ನದಿಯ ಕಣಿವೆಯಲ್ಲಿ ಕರ್ನಾಟಕ ಸರ್ಕಾರವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸಿದೆ. ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ಗೆ 2018ರ ಮೇ 18ರಂದು ಅರ್ಜಿ ಸಲ್ಲಿಸಿತ್ತು. ಇದನ್ನೂ ಓದಿ: ಸ್ಪೀಕರ್‌ ಬಿರ್ಲಾ ಕೊಠಡಿಯಲ್ಲಿ ಸಭೆ – ಮೋದಿ ಮಾತಿಗೆ ನಕ್ಕ ವಿಪಕ್ಷಗಳ ಸದಸ್ಯರು

ಜಲವಿವಾದ ನ್ಯಾಯಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ತಮಿಳುನಾಡು ಸರ್ಕಾರವು ಕೇಂದ್ರ ಸರ್ಕಾರಕ್ಕೆ 2019ರ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಜಲಶಕ್ತಿ ಸಚಿವಾಲಯವು 2020ರಲ್ಲಿ ಸಂಧಾನ ಸಭೆ ನಡೆಸಿತ್ತು. ಆದರೆ, ರಾಜ್ಯ ಸರ್ಕಾರಗಳು ಒಮ್ಮತಕ್ಕೆ ಬಂದಿರಲಿಲ್ಲ. ಹೊಸದಾಗಿ ಸಂಧಾನ ನಡೆಸುವಂತೆ ಕರ್ನಾಟಕ ಸರ್ಕಾರವು ಕೇಂದ್ರಕ್ಕೆ 2024ರ ಜೂನ್‌ನಲ್ಲಿ ಒತ್ತಾಯಿಸಿತ್ತು. ಕರ್ನಾಟಕದ ಜಲಾನಯನ ಪ್ರದೇಶದಲ್ಲಿ ಒಟ್ಟು 11.77 ಟಿಎಂಸಿ ನೀರಿನಲ್ಲಿ 9.77 ಟಿಎಂಸಿ ನೀರನ್ನು ಬಳಸಲು ಯೋಜಿಸಲಾಗಿದೆ. ಇದರಲ್ಲಿ 2 ಟಿಎಂಸಿ ಮತ್ತು ಹೆಚ್ಚುವರಿ ನೀರು ತಮಿಳುನಾಡಿಗೆ ಉಳಿದಿದೆ. ಇದು ತಮಿಳುನಾಡಿನ ಅವಶ್ಯಕತೆಗಳನ್ನು ಪೂರೈಸಲು ಸಾಕಾಗುತ್ತದೆ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿತ್ತು.
Share This Article