ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಳ: ನಿನ್ನೆ ಎಷ್ಟಿತ್ತು? ಇಂದು ಎಷ್ಟು ಹೆಚ್ಚಾಗಿದೆ?

Public TV
1 Min Read

ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಿಂದ(ಕೆಆರ್‍ಎಸ್) ತಮಿಳುನಾಡಿಗೆ ಹರಿಯುತ್ತಿದ್ದ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಭಾನುವಾರ 4067 ಕ್ಯೂಸೆಕ್ ನೀರನ್ನು ಬಿಟ್ಟಿದ್ದರೆ, ಸೋಮವಾರ 6067 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.

ಆಗಸ್ಟ್ 4ರಂದು 4787 ಕ್ಯೂಸೆಕ್ ಒಳ ಹರಿವು ಇದ್ದರೆ, ಸೋಮವಾರ 13509 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹೇಮಾವತಿ ಜಲಾಶಯದಿಂದ ನೀರನ್ನು ಬಿಟ್ಟ ಕಾರಣ ಜಲಾಶದ ಒಳ ಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣವೂ ಹೆಚ್ಚಳವಾಗಿದೆ.

124.80 ಅಡಿ ಗರಿಷ್ಟ ಸಾಮರ್ಥ್ಯವಿರುವ ಅಣೆಕಟ್ಟೆಯಲ್ಲಿ  ಇಂದು 92.30 ಅಡಿ ನೀರು ಸಂಗ್ರಹವಾಗಿದೆ. 49.45 ಟಿಎಂಸಿ ಸಾಮರ್ಥ್ಯವಿರುವ ಜಲಾಶಯದಲ್ಲಿ ಇಂದು 17.35 ಟಿಎಂಸಿ ನೀರು ಸಂಗ್ರಹವಾಗಿದೆ.

ಜಿಲ್ಲೆಯ ನಾಲೆಗೆ ನೀರು ಹರಿಸುವಂತೆ ಪ್ರತಿಭಟನೆ ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಕ್ಯಾರೆ ಎನ್ನದೇ ತಮಿಳುನಾಡಿಗೆ ನೀರು ಬಿಡುತ್ತಿರುವುದಕ್ಕೆ ರೈತರು ಆಕ್ರೋಶಗೊಂಡಿದ್ದಾರೆ. ನಾಲೆಗಳಿಗೆ ನೀರು ಬಿಡದೆ ತಮಿಳುನಾಡಿಗೆ ನೀರು ಹರಿಸುತ್ತಿರೋ ರಾಜ್ಯ ಸರ್ಕಾರದ ವಿರುದ್ಧ ಕ್ರಮ ಖಂಡಿಸಿ ಬಿಜೆಪಿ ಕಾರ್ಯಕರ್ತರು ಮೈಮೇಲೆ ಸಗಣಿ ಸುರಿದುಕೊಂಡು ಆಕ್ರೋಶವನ್ನ ಹೊರಹಾಕಿದರು.

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮತ್ತಿತರರು, ತಮ್ಮ ಮೈ ಮೇಲೆ ಸೆಗಣಿ ಸುರಿದುಕೊಂಡು ಪ್ರತಿಭಟನೆ ನಡೆಸಿದರು. ತಮಿಳುನಾಡಿಗೆ ನೀರು ಹರಿಸುತ್ತಿರುವ ಸರ್ಕಾರ ಕಾವೇರಿ ಕೊಳ್ಳದ ರೈತರನ್ನ ಕಡೆಗಣಿಸುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನ ಭರ್ತಿ ಮಾಡಿ ಅಂತಾ ಸಾಕಷ್ಟು ಸಲ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಇನ್ನು ಮಾಜಿ ಪ್ರಧಾನಿ ದೇವೇಗೌಡರು ಸಹ ಹೇಮಾವತಿ ಭಾಗಕ್ಕೆ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ನೀರು ಬಿಡಿಸುತ್ತಾರೆ. ಆದರೆ ಕಾವೇರಿ ಭಾಗದವರು ನಾವೇನು ಮಾಡಿದ್ದೀವಿ ಅಂತಾ ಪ್ರತಿಭಟನಾಕಾರರು ಪ್ರಶ್ನೆ ಮಾಡಿದ್ದಾರೆ.

ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ಬರುವ ಸ್ವಾತಂತ್ರ್ಯ ದಿನಾಚರಣೆದಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಧ್ವಜಾರೋಹಣಕ್ಕೆ ಅಡ್ಡಿಪಡಿಸುತ್ತೇವೆ ಎಂದು ಕಾರ್ಯಕರ್ತರು ಎಚ್ಚರಿಕೆಯನ್ನು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *