ಬೆಂಗಳೂರು: ಕೆಆರ್‌ಎಸ್ (KRS) ಅಣೆಕಟ್ಟೆಯ 92 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲಿ ಭರ್ತಿಯಾಗಿದ್ದು ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕಾವೇರಿಗೆ ಬಾಗಿನ ಅರ್ಪಿಸಲಿದ್ದಾರೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದರಿಂದ ಕರ್ನಾಟಕ (Karnataka) ತಮಿಳುನಾಡಿಗೆ (Tamilnadu) ಬರೋಬ್ಬರಿ 305.611 ಟಿಎಂಸಿ ಕಾವೇರಿ ನೀರನ್ನು ಹರಿಸಿದೆ.
ಹೌದು. ಫೆಬ್ರವರಿ 2 , 2018 ರ ಸುಪ್ರೀಂ ಕೋರ್ಟ್ (Supreme Court) ತೀರ್ಪಿನಂತೆ ಕರ್ನಾಟಕ ಪ್ರತಿ ವರ್ಷ 177.250 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಬೇಕು. ಆದರೆ ಕರ್ನಾಟಕ ಕಳೆದ ವರ್ಷ 128 ಟಿಎಂಸಿ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಿದೆ.
ಈ ಜೂನ್ ತಿಂಗಳಿನಲ್ಲಿ ಕರ್ನಾಟಕ ತಮಿಳುನಾಡಿಗೆ 9.19 ಟಿಎಂಸಿ ನೀರನ್ನು ಬಿಡಬೇಕಿತ್ತು. ಆದರೆ ಕಾವೇರಿ ಜಲಾನಯನ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಈಗಾಗಲೇ 21.515 ಟಿಎಂಸಿ ನೀರನ್ನು ಹರಿಸಿದೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸಂಬಂಧ, ಕಾವೇರಿ ಪ್ರಾಧಿಕಾರದ ಆದೇಶವನ್ನು ಇದುವರೆಗೆ ಕರ್ನಾಟಕ ಬಹುತೇಕ ಪಾಲಿಸಿಕೊಂಡು ಬಂದಿದೆ. ಎರಡು ಬಾರಿ ತೀವ್ರ ಅನಾವೃಷ್ಟಿಯ ಹಿನ್ನಲೆಯಲ್ಲಿ ಪ್ರಾಧಿಕಾರದ ಸೂಚನೆಯನ್ನು ಕರ್ನಾಟಕಕ್ಕೆ ಪಾಲಿಸಲು ಸಾಧ್ಯವಾಗಿರಲಿಲ್ಲ ಇದನ್ನೂ ಓದಿ: Maharashtra | ʻತ್ರಿಭಾಷಾ ಸೂತ್ರʼ ಆದೇಶ ಹಿಂಪಡೆದ ʻಮಹಾʼ ಸರ್ಕಾರ
ಯಾವ ವರ್ಷ ಎಷ್ಟು ಟಿಎಂಸಿ ಹರಿದಿದೆ?
2018-19 : 404.44
2019-20 : 275.40
2020-21 : 211.316
2021-22 : 281.084
2022-23 : 667.533
2023-24 : 81.417
2024-25 : 305.611
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8 ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.
ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪ ನೀಡಿತ್ತು. ಈ ತೀರ್ಪು ಪ್ರಕಾರ ಜೂನ್‌ನಲ್ಲಿ ನಲ್ಲಿ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಟಿಎಂಸಿ ಸೇರಿ ಒಟ್ಟು 192 ಟಿಎಂಸಿ ನೀರನ್ನು ಕರ್ನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕಿತ್ತು. ಈ ಐತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ. ಎಎಂ ಖಾನ್ವೀಲ್ಕರ್ ಮತ್ತು ಅಮಿತಾವ್ ರಾಯ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠ 2018 ಫೆಬ್ರವರಿ 16 ರಂದು ಐತೀರ್ಪನ್ನು ಸ್ವಲ್ಪ ಬದಲಾಯಿಸಿ 177.75 ಟಿಎಂಸಿ ನೀರನ್ನು ಕರ್ನಾಟಕ ಪ್ರತಿವರ್ಷ ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಿತ್ತು. ಅಷ್ಟೇ ಅಲ್ಲದೇ ಯಾವ ತಿಂಗಳಿನಲ್ಲಿ ಎಷ್ಟು ನೀರು ಬಿಡಬೇಕು ಎನ್ನುವುದನ್ನು ಕೇಂದ್ರ ನೇಮಿಸುವ ಸಂಸ್ಥೆ ನಿರ್ಧರಿಸಬೇಕು ಎಂದು ಹೇಳಿತ್ತು.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic feet per second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.