ರೆಡ್‍ಝೋನ್ ಪಟ್ಟಿಯಲ್ಲಿ 14 ಜಿಲ್ಲೆಗಳ 29 ತಾಲೂಕುಗಳು

Public TV
2 Min Read

ಬೆಂಗಳೂರು: ಕೊರೊನಾ ಪೀಡಿತ ಭಾಗಗಳಿಗೆ ಹೊಸ ಮಾನದಂಡವನ್ನು ರಾಜ್ಯ ಸರ್ಕಾರ ಪ್ರಕಟಿಸಿದ್ದು, ವಲಯಗಳ ವಿಂಗಡಣೆ ಮಾಡಲಾಗಿದೆ. ಹೊಸ ಪಟ್ಟಿಯಲ್ಲಿ ರೆಡ್ ಝೋನ್‍ಗಳ ಸಂಖ್ಯೆ 8 ರಿಂದ 14ಕ್ಕೆ ಏರಿಕೆಯಾಗಿದೆ.

ರಾಜ್ಯದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳು ರಾಜ್ಯದ ರೆಡ್ ಝೋನ್‍ಗಳಾಗಿವೆ. ಒಟ್ಟಾರೆ ರಾಜ್ಯದ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್‍ನಲ್ಲಿದೆ.

ಕೊರೊನಾ ಸೋಂಕಿನ ತೀವ್ರತೆ ಆಧಾರದ ಮೇಲೆ ರಾಜ್ಯದಲ್ಲಿ ಕೆಂಪು ವಲಯಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೊರೊನಾ ವಲಯಗಳ ವಿಂಗಡಣೆಗೆ ರಾಜ್ಯ ಸರ್ಕಾರ ಹೊಸ ಮಾನದಂಡ ಬಳಸಿದೆ. ನಾಲ್ಕು ವಲಯಗಳ ಬದಲು ಮತ್ತೆ ಮೂರು ವಲಯಗಳ ಸೂತ್ರಕ್ಕೆ ಜೋತುಬಿದ್ದಿದೆ. ಹಳದಿ ವಲಯವನ್ನು ರಾಜ್ಯ ಸರ್ಕಾರ ಕೈಬಿಟ್ಟಿದೆ. 28 ದಿನಗಳ ಅವಧಿಯಲ್ಲಿ ಕೊರೊನಾ ಸೋಂಕು ಕಾಣಿಸದಿದ್ದರೆ ಆ ತಾಲೂಕನ್ನು ಗ್ರೀನ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನದಲ್ಲಿ ಒಂದೇ ಒಂದು ಹೊಸ ಕೇಸ್ ಕಂಡು ಬರದೇ ಇದ್ದರೆ ಅದನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ. 14 ದಿನಗಳ ಅವಧಿಯಲ್ಲಿ ಒಂದು ಕೇಸ್ ಕಂಡು ಬಂದರೂ ಅದನ್ನು ರೆಡ್ ಝೋನ್ ಎಂದು ಪರಿಗಣಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಅನ್ವಯ ಇದೀಗ 14 ಜಿಲ್ಲೆಗಳ 29 ತಾಲೂಕುಗಳು ರೆಡ್‍ಝೋನ್ ವ್ಯಾಪ್ತಿಗೆ ಬರುತ್ತವೆ. ಈ ಪಟ್ಟಿಯಲ್ಲಿ ನಿನ್ನೆ ತಾಲೂಕುಗಳ ಸಂಖ್ಯೆ 14 ಇತ್ತು.

ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರ, ಗದಗ ತಾಲೂಕು, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಸಿರಗುಪ್ಪ, ಬಳ್ಳಾರಿ ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ ತಾಲೂಕು, ತುಮಕೂರು ತಾಲೂಕು, ಮೈಸೂರು ತಾಲೂಕು, ನಂಜನಗೂಡು, ಮಂಡ್ಯ ಜಿಲ್ಲೆಯ ಮಳವಳ್ಳಿ, ನಾಗಮಂಗಲ, ಮಂಡ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬಂಟ್ವಾಳ ತಾಲೂಕುಗಳು, ಬೀದರ್ ತಾಲೂಕು, ಕಲಬುರಗಿ ತಾಲೂಕು, ಶಹಾಬಾದ್ ತಾಲೂಕು, ವಿಜಯಪುರ ತಾಲೂಕು, ಬಾಗಲಕೋಟೆ ಜಿಲ್ಲೆಯ ಮುಧೋಳ, ಜಮಖಂಡಿ, ಬಾಗಲಕೋಟೆ ತಾಲೂಕು, ಬೆಳಗಾವಿ ಜಿಲ್ಲೆಯ ರಾಯಭಾಗ, ಹುಕ್ಕೇರಿ, ಬೆಳಗಾವಿ ತಾಲೂಕು, ಬೆಂಗಳೂರು ನಗರ ಜಿಲ್ಲೆಯ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ ಪ್ರದೇಶಗಳು ಪಟ್ಟಿಯಲ್ಲಿದೆ.

ಉಳಿದಂತೆ ಕೊರೊನಾ ಸೋಂಕಿಲ್ಲದ 14 ಜಿಲ್ಲೆಗಳ ಪೈಕಿ ರಾಮನಗರ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್‍ಡೌನ್ ಸಡಿಲಿಕೆ ಆಗಿದೆ. ಬೆಳಗ್ಗೆಯಿಂದ್ಲೇ ವ್ಯಾಪಾರ ವಹಿವಾಟು, ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳು ಆರಂಭವಾಗಿವೆ. ರಾಯಚೂರು, ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ಶಿವಮೊಗ್ಗ, ಯಾದಗಿರಿಯಲ್ಲಿ ಅಂಗಡಿ ಮುಂಗಟ್ಟು ಓಪನ್ ಆಗಿವೆ. ಪೊಲೀಸರು ಸಾಮಾಜಿಕ ಅಂತರ ಪಾಲಿಸುವಂತೆ, ಮಾಸ್ಕ್ ಧರಿಸುವಂತೆ ಎಲ್ಲಾ ಕಡೆ ಮೈಕ್‍ಗಳ ಮೂಲಕ ಜಾಗೃತಿ ಮೂಡಿವ ಕಾರ್ಯ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *