ರಾಜ್ಯದ ಹಲವು ಭಾಗಗಳಲ್ಲಿ ಗಾಳಿ ಸಹಿತ ಭಾರೀ ಮಳೆ

Public TV
1 Min Read

ಬೆಂಗಳೂರು: ರಾಜ್ಯದ ಚಾಮರಾಜನಗರ, ಮಂಗಳೂರು, ಹಾಸನ (Hassan), ಹಾವೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಭಾರೀ (Rain) ಮಳೆಯಾಗಿದೆ. ಮಳೆಯ ಪರಿಣಾಮದಿಂದ ರೈತರು ಒಂದೆಡೆ ಸಂಭ್ರಮ ಪಟ್ಟರೆ ಇನ್ನೊಂದೆಡೆ ಕೆಲವರು ಬೆಳೆ ಹಾನಿ ಹಾಗೂ ಕೆಲವು ಅವಾಂತರಗಳಿಂದ ಸಣ್ಣಪುಟ್ಟ ತೊಂದರೆ ಅನುಭವಿಸಿದ್ದಾರೆ.

ಚಾಮರಾಜನಗರದ ಹಲವೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಇದರ ಪರಿಣಾಮ ಹೆಬ್ಬಸೂರು ಗ್ರಾಮದ ಮಂಜುನಾಥ್ ಎಂಬವರಿಗೆ ಸೇರಿದ ಬಾಳೆ ಬೆಳೆ ನೆಲಕಚ್ಚಿದ್ದು, ಲಕ್ಷಾಂತರ ರೂ. ನಷ್ಟ ಅನುಭವಿಸಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯ ವಿವಿಧೆಡೆ ಭಾರೀ ಗಾಳಿ, ಗುಡುಗು- ಸಿಡಿಲು ಸಹಿತ ಮಳೆಯಾಗಿದೆ. ಬಿರುಗಾಳಿಗೆ ಬೇಲೂರಿನ ಗುಣಿಕೆರೆ ಬೀದಿಯಲ್ಲಿ ಕೇಶವಮೂರ್ತಿ ಎಂಬವರ ಮನೆಯ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದಿದೆ. ಪರಿಣಾಮ ಗೃಹಪಯೋಗಿ ವಸ್ತುಗಳು ಜಖಂ ಆಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಪುರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಧಾರವಾಡದಲ್ಲಿ ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗಿದೆ. ಪರಿಣಾಮ ನಗರದ ಹಲವೆಡೆ ಮರಗಳು ಧರೆಗೆ ಉರುಳಿವೆ. ಕಳೆದ ಒಂದು ಗಂಟೆಯಿಂದ ಮಳೆ ಮುಂದುವರಿಯುತ್ತಿದೆ. ಹುಬ್ಬಳ್ಳಿಯಲ್ಲೂ ಮಳೆಯಾಗುತ್ತಿದೆ. ನಗರದ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರದಾಡುತ್ತಿದ್ದಾರೆ.

ಚಿಕ್ಕಮಗಳೂರು ನಗರ, ಜಯಪುರ, ಮೂಡಿಗೆರೆ, ಎನ್.ಆರ್.ಪುರ, ಕೊಪ್ಪ ಭಾಗಗಳಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಕಳೆದ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಹಲವೆಡೆ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆಯಿಂದ ರೈತರು, ಅಡಿಕೆ, ಕಾಫಿ-ಮೆಣಸು ಬೆಳೆಗಾರರ ಮೊಗದಲ್ಲಿ ಸಂತಸ ಮನೆಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಈ ವೇಳೆ ಬಿಸಿಲಿನ ಬೇಗೆಯಿಂದ ಬಳಲಿದ್ದ ಭಕ್ತರು ಮಳೆಯನ್ನು ಸಂಭ್ರಮಿಸಿದ್ದಾರೆ.

Share This Article