ಮುಷ್ಕರ ಕೈಬಿಟ್ಟ ಖಾಸಗಿ ವೈದ್ಯರು: ಶುಕ್ರವಾರದಿಂದ ಸೇವೆಗೆ ಹಾಜರ್

Public TV
1 Min Read

ಬೆಂಗಳೂರು: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ವಿರೋಧಿಸಿ ನಡೆಸುತ್ತಿದ್ದ ಖಾಸಗಿ ಆಸ್ಪತ್ರೆಗಳ ವೈದ್ಯರು ತಮ್ಮ ಮುಷ್ಕರವನ್ನು ಹೈಕೋರ್ಟ್ ಮನವಿಗೆ ಒಪ್ಪಿ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆದಿದ್ದಾರೆ.

ನಾಳೆಯಿಂದ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಸೇವೆ ಲಭ್ಯವಾಗಲಿದ್ದು, ಎಂದಿನಂತೆ ಖಾಸಗಿ ಆಸ್ಪತ್ರೆ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಫನಾ ಮುಖ್ಯಸ್ಥ ಜಯಣ್ಣ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಐಎಂಎನಲ್ಲಿ ನಡೆದ ಸಭೆಯಲ್ಲಿ ಹೈಕೋರ್ಟ್ ಮನವಿಗೆ ಒಪ್ಪಿ ಮುಷ್ಕರವನ್ನು ಕೈಬಿಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಖಾಸಗಿ ವೈದ್ಯರ ತುರ್ತು ಸಭೆ ಮುಕ್ತಾಯವಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫನಾ ಮುಖ್ಯಸ್ಥ ಜಯಣ್ಣ, ಹೈಕೋರ್ಟ್ ಮುಷ್ಕರ ಕೈಬಿಡುವಂತೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ವೈದ್ಯರು ಸೇವೆಗೆ ತೆರಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈಗಾಗಲೇ ತುರ್ತು ಸೇವೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರ ನಮ್ಮ ಕೆಲ ಪದಾಧಿಕಾರಿಗಳು ಬೆಳಗಾವಿಗೆ ಹೋಗಲಿದ್ದಾರೆ  ಎಂದು ತಿಳಿಸಿದರು.

ಮುಂದುವರಿದ ಗೊಂದಲ: ಖಾಸಗಿ ಆಸ್ಪತ್ರೆಗಳ ಮುಷ್ಕರ ವಾಪಸ್ ಪಡೆಯುವ ವಿಚಾರದಲ್ಲಿ ವೈದ್ಯಕೀಯ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಮುಂದುವರಿದಿದೆ. ಹೈಕೋರ್ಟ್ ಸೂಚನೆಯನ್ವಯ ಸಭೆ ನಡೆಸಿದ ಫನಾ ಸಂಘಟನೆ ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗೋದಾಗಿ ಪ್ರಕಟಿಸಿದೆ. ಆದ್ರೆ ವಿರೋಧ ವ್ಯಕ್ತಪಡಿಸಿದ ಐಎಂಎ ಸಂಘಟನೆ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಅಂತಿಮ ನಿರ್ಧಾರ ಕೈಗೊಳ್ಳೋದಾಗಿ ಹೇಳಿದೆ. ಹೀಗಾಗಿ ಮುಷ್ಕರ ವಾಪಸ್ ವಿಚಾರದಲ್ಲಿ ಗೊಂದಲ ಮುಂದುವರಿದಿದೆ.

ಇನ್ನು ನಾಳೆ ಮಧ್ಯಾಹ್ನ 2 ಗಂಟೆ ಮುಷ್ಕರ ನಿರತ ವೈದ್ಯರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಇದಕ್ಕೆ ಪೂರ್ವಬಾವಿಯಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಪ್ರವಾಸಿ ಮಂದಿರದಲ್ಲಿ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ವೈದ್ಯಕೀಯ ತಿದ್ದುಪಡಿ ವಿಧೇಯಕವನ್ನು ಮಂಡಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ.

 

https://youtu.be/rAMDIHQ6ZjE

 

 

Share This Article
Leave a Comment

Leave a Reply

Your email address will not be published. Required fields are marked *