ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

Public TV
2 Min Read

ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಸಿಎಂ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ.

ಕನ್ನಡ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ವೈದ್ಯರ ಮುಖಂಡರೊಂದಿಗೆ ಮಾತುಕತೆ ನಡೆಸಿ, ಕಾಯ್ದೆ ಕುರಿತಂತೆ ಅವರಲ್ಲಿದ್ದ ಆತಂಕ ಮತ್ತು ಭಯವನ್ನು ನಿವಾರಿಸಿದ್ದಾರೆ.

ಸಂಧಾನ ಸಭೆ ನಡೆಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಕೆಪಿಎಂಇ ತಿದ್ದುಪಡಿ ಮಸೂದೆಯಲ್ಲಿನ ಕೆಲವು ಅಂಶಗಳಿಗೆ ಮಾರ್ಪಾಡು ಮಾಡಿ ಮಂಡಿಸಲಾಗುವುದು. ರಾಜ್ಯದ ಎಲ್ಲ ಜನರಿಗೆ ಕೈಗೆಟಕುವ ದರಗಳಲ್ಲಿ ಉತ್ತಮ ಆರೋಗ್ಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

ರಾಜ್ಯದ ಜನ ಮತ್ತು ವೈದ್ಯರ ಹಿತ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಯಾರಿಗೂ ತೊಂದರೆಯಾಗದಂತೆ, ರಾಜ್ಯದ ಜನರ ಹಿತಾಸಕ್ತಿಗೂ ಧಕ್ಕೆಯಾಗದಂತೆ ಮಸೂದೆಯನ್ನು ಅಂಗೀಕರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

ಸಭೆ ಬಳಿಕ ಆರೋಗ್ಯ ಸಚಿವ ರಮೇಶ್ ಕುಮಾರ್ ಮಾತನಾಡಿ, ಆಸ್ಪತ್ರೆ ವಿರುದ್ಧ ಸುಳ್ಳು ದೂರು ಕೊಟ್ಟರೆ ದೂರು ಕೊಟ್ಟವರ ವಿರುದ್ಧ ಕ್ರಮಕ್ಕೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಿದ್ದೇವೆ. ಇದನ್ನ ನಿವಾರಿಸಿ ಈಗ ಕಾಯ್ದಿಯನ್ನ ಜಾರಿಗೆ ತರಲು ಮುಂದಾಗಿದ್ದೇವೆ. ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದರೆ ಶವ ನೀಡಲು ಹಣಕ್ಕಾಗಿ ಬಲವಂತ ಮಾಡುವಂತಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಏನು ಚರ್ಚೆ ಆಯ್ತು?
ಜಿಲ್ಲಾ ಕುಂದುಕೊರತೆ ಸಮಿತಿಯಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದ್ದು, ವೈದ್ಯರು ವಕೀಲರನ್ನ ಇಟ್ಟುಕೊಳ್ಳಬಹುದು. ಬಿಪಿಎಲ್ ಕಾರ್ಡ್‍ದಾರರಿಗೆ ದರ ನಿಗದಿ ಮಾಡಬೇಕು ಎನ್ನುವ ನಿರ್ಧಾರಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ.

ಹೈಕೋರ್ಟ್ ಆದೇಶ:
ವೈದ್ಯರ ಮುಷ್ಕರಕ್ಕೆ ಸಂಬಂಧಿಸಿದ್ದಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವೇಳೆ ಹೈಕೋರ್ಟ್ ಇಂದು ವೈದ್ಯರನ್ನು ತರಾಟೆಗೆ ತೆಗೆದುಕೊಂಡಿತ್ತು. ಅಷ್ಟೇ ಅಲ್ಲದೇ ಗುರುವಾರ ನಾವು ಪರಿ ಪರಿಯಾಗಿ ಮನವಿ ಮಾಡಿ ಕರ್ತವ್ಯಕ್ಕೆ ಹಾಜರಾಗುವಂತೆ ಹೇಳಿದ್ದರೂ ಹಠ ಮುಂದುವರಿಸಿದ್ದಕ್ಕೆ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿತ್ತು. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದೇ ಇದ್ದಲ್ಲಿ ಮುಂದೆ ಕಠಿಣ ಆದೇಶ ಹೊರಡಿಸಬೇಕಾದಿತು ಎಂದು ಖಡಕ್ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ವೈದ್ಯರು ಸಂಧಾನಕ್ಕೆ ಬಗ್ಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

Share This Article
Leave a Comment

Leave a Reply

Your email address will not be published. Required fields are marked *