ಗೋ ರಕ್ಷಣೆ ಹೆಸ್ರಲ್ಲಿ ಕಾನೂನು ಕೈಗೆತ್ತಿಕೊಳ್ಳೊ ಮಂದಿ ವಿರುದ್ಧ ಕ್ರಮ: ಸಿಎಂ

Public TV
2 Min Read

ಬೆಂಗಳೂರು: ಗೋರಕ್ಷಣೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ವ್ಯಕ್ತಿಗಳಿಗೆ, ಸಂಘಟನೆಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಿಎಂ ಸಿದ್ದರಾಮಯ್ಯನವರು ಫೇಸ್‍ಬುಕ್ ಮತ್ತು ಟ್ವಿಟ್ಟರ್ ನಲ್ಲಿ, ಗೋರಕ್ಷಣೆಯ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವ ಯಾವುದೇ ಗುಂಪು, ವ್ಯಕ್ತಿಗಳಿಗೆ ಕರ್ನಾಟಕ ಗೋವಧೆ ತಡೆ ಕಾಯಿದೆ – 1964ರ ಅಡಿ ರಕ್ಷಣೆ ದೊರೆಯುವುದಿಲ್ಲ ಎಂದು ಹೇಳಿದ್ದನ್ನು ಕೆಲವು ಮಂದಿ ಸ್ವಾಗತಿಸಿದ್ದರೆ, ಕೆಲವರು ಟೀಕಿಸಿದ್ದಾರೆ.

ಪ್ರಮಾಣ ಪತ್ರ ಸಲ್ಲಿಸಿದ್ದ ಸರ್ಕಾರ:
ಗೋ ಸಂರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆಸುವ ಮಂದಿಯನ್ನು ನಾವು ಬೆಂಬಲಿಸುವುದಿಲ್ಲ. 1964 ಗೋವಧೆ ತಡೆ ಅಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‍ಗೆ ರಾಜ್ಯ ಸರ್ಕಾರ ಈ ಹಿಂದೆಯೇ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.

ಹೀಗಾಗಿ ಇಲ್ಲಿ ಸಿಎಂ ಸಿದ್ದರಾಮಯ್ಯನವರ ಫೇಸ್ ಬುಕ್ ನಲ್ಲಿ ಪ್ರಕಟವಾಗಿರುವ ಪೋಸ್ಟ್, ಇದಕ್ಕೆ ಜನರ ಪ್ರತಿಕ್ರಿಯೆ ನೀಡಲಾಗಿದೆ.

ಸಿಎಂ ಫೇಸ್‍ಬುಕ್ ಸ್ಟೇಟಸ್:
ಗೋರಕ್ಷಣೆಯ ಹೆಸರಿನಲ್ಲಿ ಎಸಗುವ ಅಪರಾಧ ಅಥವಾ ಕ್ರಿಮಿನಲ್ ಚಟುವಟಿಕೆಗಳಿಗೆ ಕಾನೂನಿನಡಿ ಯಾವುದೇ ರಕ್ಷಣೆ ಇಲ್ಲ. ಇಂಥ ಗುಂಪು ಅಥವಾ ವ್ಯಕ್ತಿಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಕರ್ನಾಟಕ ಸರ್ಕಾರವು ಗೋರಕ್ಷಕರನ್ನು ರಕ್ಷಿಸುವ ಕಾನೂನನ್ನು ಸಮರ್ಥಿಸಿಕೊಂಡಿದೆ ಎನ್ನುವ ಅರ್ಥದಲ್ಲಿ ಕೆಲವು ಮಾಧ್ಯಮಗಳಲ್ಲಿ ಸತ್ಯಕ್ಕೆ ದೂರವಾದ ವರದಿಗಳು ಬಂದಿವೆ.

ಕರ್ನಾಟಕ ಗೋವಧೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 1964ರ ಪರಿಚ್ಛೇಧ 15ರ ಅಡಿಯಲ್ಲಿ ಕಾನೂನು ರೀತ್ಯಾ ರಚಿಸಲಾದ ಗುಂಪು ಅಥವಾ ಈ ಕಾನೂನಿನಡಿ ಕ್ರಮ ಕೈಗೊಳ್ಳಬಹುದಾದ ಅಧಿಕಾರವುಳ್ಳ ವ್ಯಕ್ತಿಗಳು `ಉತ್ತಮ ಉದ್ದೇಶದಿಂದ’ ಕಾನೂನಿನಲ್ಲಿ ನೀಡಲಾಗಿರುವ ಅವಕಾಶದನ್ವಯ ಜರುಗಿಸಿದ ಕ್ರಮಗಳಿಗೆ ರಕ್ಷಣೆಯನ್ನು ನೀಡುತ್ತದೆಯೇ ಹೊರತು ಯಾವುದೇ ವ್ಯಕ್ತಿ, ಸಮೂಹಗಳು ಗೋರಕ್ಷಣೆಯ ಹೆಸರಿನಲ್ಲಿ ಎಸಗುವ ಅಪರಾಧ ಅಥವಾ ಕ್ರಿಮಿನಲ್ ಚಟುವಟಿಕೆಗಳಿಗೆ ರಕ್ಷಣೆಯನ್ನು ನೀಡುವುದಿಲ್ಲ.

ಮೇಲಿನ ಕಾನೂನಿನ ಪರಿಚ್ಛೇಧ 15ರ ಅವಕಾಶವನ್ನು ಕಾನೂನು ರೀತ್ಯಾ ನೊಂದಾಯಿಸಲ್ಪಟ್ಟ ಯಾವುದೇ ಸಂಘ, ಸಂಸ್ಥೆಗಳಾಗಲಿ, ಅದರ ಸದಸ್ಯರಾಗಲಿ ಬಳಸಲು ಬರುವುದಿಲ್ಲ. ಅದೇ ರೀತಿ ಗೋವಿನ ರಕ್ಷಣೆಯನ್ನು ಮಾಡುವ ಉದ್ದೇಶದಿಂದ ರಚಿಸಿಕೊಂಡಿರುವ ಗುಂಪು, ಸಮೂಹಗಳಿಗೂ ಈ ಪರಿಚ್ಛೇಧದಡಿ ರಕ್ಷಣೆ ಇರುವುದಿಲ್ಲ. ಇಂತಹ ಸಂಘಟನೆಗಳು ಅದರ ಸದಸ್ಯರು ಅಥವಾ ಮತ್ತಿನ್ನಾರೇ ಆಗಲಿ ಗೋವಿನ ರಕ್ಷಣೆಯ ಹೆಸರಿನಲ್ಲಿ ಹಿಂಸಾ ಕೃತ್ಯಗಳಲ್ಲಿ ತೊಡಗುವುದು, ಸಾಮಾಜಿಕ ಸಾಮರಸ್ಯವನ್ನು ಕದಡುವಂಥ ಕೃತ್ಯಗಳಿಗೆ ಮುಂದಾಗುವುದು, ಕಾನೂನನ್ನು ತಾವೇ ಕೈಗೆತ್ತಿಕೊಳ್ಳಲು ಪ್ರಯತ್ನಿಸುವಂಥ ಕೃತ್ಯಗಳಿಗೆ ತೊಡಗಿದರೆ ಅಂಥವರಿಗೆ ಕಾನೂನಿನ್ವಯ ಯಾವುದೇ ರಕ್ಷಣೆ ದೊರೆಯುವುದಿಲ್ಲ.

ಈ ಹಿಂದೆಯೂ ಗೋರಕ್ಷಣೆಯ ಹೆಸರಿನಲ್ಲಿ ನಡೆಸಲಾಗಿರುವ ಹಲ್ಲೆ ಹಾಗೂ ಕ್ರಿಮಿನಲ್ ಚಟುವಟಿಕೆಗಳ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಕಟ್ಟುನಿಟ್ಟಾಗಿ ಕಾನೂನು ರೀತ್ಯಾ ಕ್ರಮ ಕೈಗೊಂಡಿದೆ. ಸಾಮಾಜಿಕ ಸಾಮರಸ್ಯವನ್ನು ಕದಡುವ, ಧರ್ಮ, ಜಾತಿಗಳ ಅಧಾರದಲ್ಲಿ ಸಮಾಜವನ್ನು ಒಡೆಯುವ ಯಾವುದೇ ಕೃತ್ಯಗಳ ವಿರುದ್ಧ ಸರ್ಕಾರವು ಮುಂದೆಯೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *