ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ದಿನವೇ ಕೊಟ್ಟ ಮಾತಿನ ಅಸ್ತ್ರ ಪ್ರಯೋಗಿಸಿದ ಸುರೇಶ್‌

3 Min Read

– ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವುದಿಲ್ಲ

ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸರ್ಕಾರಕ್ಕೆ ಎರಡೂವರೆ ವರ್ಷ ಪೂರ್ಣಗೊಂಡ ದಿನವೇ ಕೊಟ್ಟ ಮಾತಿನ ಅಸ್ತ್ರವನ್ನು ಮಾಜಿ ಸಂಸದ, ಬಮೂಲ್‌ ಅಧ್ಯಕ್ಷ ಡಿ.ಕೆ ಸುರೇಶ್‌ (DK Suresh) ಪ್ರಯೋಗಿಸಿದ್ದಾರೆ.

ಸಿದ್ದರಾಮಯ್ಯನವರಿಗೂ ಜವಾಬ್ದಾರಿ ಇದೆ, ಸಿದ್ದರಾಮಯ್ಯ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಎಂದು ಹೇಳಿ ಸಿಎಂ ಮತ್ತು ಕಾಂಗ್ರೆಸ್‌ ಹೈಕಮಾಂಡ್‌ಗೆ (Congress High Command) ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳು ನೀವು ಸಿಎಂ ಅವರನ್ನು ಭೇಟಿ ಮಾಡಿದಾಗ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿದಿರಾ ಎಂದು ಕೇಳಿದ್ದಕ್ಕೆ, ಸಿಎಂ ಅವರ ಬಳಿ ಅಧಿಕಾರ ಹಸ್ತಾಂತರ ವಿಚಾರ ಚರ್ಚೆ ಮಾಡಿಲ್ಲ. ಅಷ್ಟು ದೊಡ್ಡವನೂ ನಾನಲ್ಲ. ಅವರು ಹಿರಿಯ ನಾಯಕರು. ಅವರಿಗೆ ತಮ್ಮದೇ ಆದ ಜವಾಬ್ದಾರಿ ಇದೆ. ಕರ್ನಾಟಕದ ಜನರಿಗೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದಾರೆ. ಈ ಸರ್ಕಾರದಲ್ಲೂ ಅವರು ಯಾರಿಗೆ ಯಾವ ಮಾತು ಕೊಟ್ಟಿದ್ದಾರೋ ಅದರಂತೆ ನಡೆಯುತ್ತಿದ್ದಾರೆ ಎಂದು ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ (Guarantee Scheme) ಬಂದು ಎರಡೂವರೆ ವರ್ಷವಾಗಿರುವ ಬಗ್ಗೆ ಕೇಳಿದಾಗ, ಕರ್ನಾಟಕದ ಜನರ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಂದಿಗೆ ಎರಡೂವರೆ ವರ್ಷ ತುಂಬಿದೆ. ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ – ದೆಹಲಿಗೆ ಹಾರಿದ ಡಿಕೆಶಿ ಬೆಂಬಲಿಗರು

 

ಸಿದ್ದರಾಮಯ್ಯ ಅವರು ಪವರ್ ಶೇರಿಂಗ್ ವಿಚಾರದಲ್ಲೂ ಕೊಟ್ಟ ಮಾತಿನಂತೆ ನಡೆಯುತ್ತಾರಾ ಎಂದು ಕೇಳಿದಾಗ, “ಅದು ನನಗೆ ಗೊತ್ತಿಲ್ಲದ ವಿಚಾರ. ಅವರು ಈಗ ಮುಖ್ಯಮಂತ್ರಿ ಆಗಿದ್ದಾರೆ. ಈ ವಿಚಾರವನ್ನು ಪಕ್ಷದ ವರಿಷ್ಠರು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತಾರೆ. ಈ ವಿಚಾರದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನೀವು ಮಾಧ್ಯಮಗಳಲ್ಲಿ ತೋರಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಹೇಳಿದರು.

ಶಿವಕುಮಾರ್ (DK Shivakumar) ಅವರು ಎರಡೂವರೆ ವರ್ಷಗಳ ಬಳಿಕ ಸಿಎಂ ಆಗುತ್ತಾರೆ ಎಂಬ ಚರ್ಚೆ ಅಭಿಮಾನಿ, ಕಾರ್ಯಕರ್ತರಲ್ಲಿದೆ ಎಂದು ಕೇಳಿದಾಗ, ಎಲ್ಲರಿಗೂ ಆ ಆಸೆ ಇದೆ. ಅವರ ಅಭಿಮಾನಿಗಳು ಹೇಳುತ್ತಿರುತ್ತಾರೆ, ಪೂಜೆ ಮಾಡುತ್ತಿರುತ್ತಾರೆ, ಅವರಿಗೆ ಏನು ಬೇಕೋ ಮಾಡುತ್ತಿರುತ್ತಾರೆ. ನಾವುಗಳು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವವರು. ಪಕ್ಷ ಏನು ಹೇಳುತ್ತದೆಯೋ ಅದನ್ನು ಸಿಎಂ, ಡಿಸಿಎಂ ಸೇರಿದಂತೆ ಎಲ್ಲಾ ನಾಯಕರು ಪಾಲನೆ ಮಾಡುತ್ತಾರೆ. ಇದು ನಮ್ಮ, ನಿಮ್ಮ ಮುಂದೆ ನಡೆಯುವ ಚರ್ಚೆಯಲ್ಲ. ಇದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಸದ್ಯಕ್ಕೆ ಸಿಎಂ ಹುದ್ದೆ ಖಾಲಿ ಇಲ್ಲ. ಏನೇ ತೀರ್ಮಾನ ಮಾಡುವುದಿದ್ದರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಇಲ್ಲಿ ವೈಯಕ್ತಿಕ ವಿಚಾರ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ:  ನಾಯಕತ್ವ ಬದಲಾವಣೆ: ಹೈಕಮಾಂಡ್ ಹೇಳಿಲ್ಲ, CLPಯಲ್ಲೂ ಚರ್ಚೆಯಾಗಿಲ್ಲ – ಪರಮೇಶ್ವರ್

 

ನಿನ್ನೆ ಶಿವಕುಮಾರ್ ಅವರು ತ್ಯಾಗದ ಮಾತುಗಳನ್ನು ಆಡಿದ್ದಾರೆ ಎಂದು ಕೇಳಿದ್ದಕ್ಕೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನೀವು ಅವರನ್ನೇ ಕೇಳಿ ಎಂದು ತಿಳಿಸಿದರು.

ಶಿವಕುಮಾರ್ ಅವರು ಪಕ್ಷದ ಅಧ್ಯಕ್ಷರಾಗಿ ಆರು ವರ್ಷ ಪೂರ್ಣಗೊಳ್ಳುತ್ತಿದೆ ಎಂಬ ಪ್ರಶ್ನೆಗೆ, ಅವರು ಪಕ್ಷದ ಕೆಲಸ ಮಾಡುತ್ತಿದ್ದು, ನಾಳೆ ಬೇರೆಯವರು ಅಧ್ಯಕ್ಷರಾದರೆ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ಯಾರೇ ಅಧ್ಯಕ್ಷರಾದರೂ ಅವರಿಗೆ ಅವಕಾಶ ಮಾಡಿಕೊಡಲು ಶಿವಕುಮಾರ್ ಅವರು ಸಿದ್ಧರಿದ್ದಾರೆ ಎಂದು ತಿಳಿಸಿದರು.

ಅವರೇ ಮುಂದುವರಿಯುತ್ತಾರೆಯೇ ಎಂದು ಕೇಳಿದಾಗ, ಅವರು ರಾಜೀನಾಮೆ ನೀಡುವುದಿಲ್ಲ ಎಂದು ನಿಮ್ಮ ಬಳಿ ಹೇಳಿಲ್ಲವಲ್ಲ. ನೀವು ಆ ರೀತಿ ಹೇಳುತ್ತಿದ್ದೀರಾ. ಅವಕಾಶ ಸಿಕ್ಕಾಗ ಏನೆಲ್ಲಾ ಮಾಡಬೇಕೋ ಅದನ್ನು ಶಿವಕುಮಾರ್ ಅವರು ಮಾಡಿದ್ದಾರೆ. ಒಬ್ಬೊಬ್ಬರೂ ಒಂದೊಂದು ರೀತಿ ವ್ಯಾಖ್ಯಾನ ಮಾಡಿ ಕಾರ್ಯಕರ್ತರನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿರುತ್ತಾರೆ. ಹೀಗಾಗಿ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬುವುದು ಪಕ್ಷ ಹಾಗೂ ಅಧ್ಯಕ್ಷರ ಜವಾಬ್ದಾರಿ. ಹೀಗಾಗಿ ಈ ಮಾತುಗಳನ್ನು ಆಡಿರುತ್ತಾರೆ ಎಂದು ತಿಳಿಸಿದರು.

Share This Article