ಹುಬ್ಬಳ್ಳಿಯಲ್ಲಿ ನಡೆಯಿತು ಸರ್ವ ಪಕ್ಷಗಳ ನಾಯಕರ ಸಭೆ

Public TV
1 Min Read

-ಸರ್ವ ಪಕ್ಷಗಳ ನಿರ್ಧಾರ ಪ್ರಕಟ

ಧಾರವಾಡ/ಹುಬ್ಬಳ್ಳಿ: ಮಹದಾಯಿ ಹಾಗೂ ಕಳಸಾ ಬಂಡೂರಿ ಯೋಜನೆ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಹತ್ವದ ಸರ್ವ ಪಕ್ಷದ ಸಭೆಯನ್ನು ಮೂರು ಪಕ್ಷಗಳ ಜನಪ್ರತಿನಿಧಿಗಳು ನಡೆಸಿದ್ದು, ಪಕ್ಷಾತೀತವಾಗಿ ಯೋಜನೆ ಬಗ್ಗೆ ಕೆಲಸ ಮಾಡಲಾಗುವುದು ಸಭೆಯಲ್ಲಿ ಸರ್ವಸಮ್ಮತ ತೀರ್ಮಾನಕ್ಕೆ ಬರಲಾಗಿದೆ.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ ಸಭೆ ನಡೆಯಿತು. ಒಂದು ಗಂಟೆಗಳ ಕಾಲ ಸುದೀರ್ಘವಾಗಿ ಚರ್ಚೆ ನಡೆಸಿದ ನಾಯಕರು ಹಲವು ವಿಚಾರಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಸಭೆ ಬಳಿಕ ಮಾತನಾಡಿದ ಬಸವರಾಜ ಹೊರಟ್ಟಿ, ಮಹದಾಯಿ ವಿಚಾರವಾಗಿ ಮುಂದಿನ ಕ್ರಮದ ಬಗ್ಗೆ ಸಂಪೂರ್ಣ ಚರ್ಚಿಸಲಾಗಿದ್ದು, ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಇನ್ನೂ ಮಹದಾಯಿ ವಿಚಾರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಇದೊಂದು ಉತ್ತಮ ಹೆಜ್ಜೆ ಆಗಿದ್ದು, ಬಹಳ ಶಾಂತ ರೀತಿಯಲ್ಲಿ ಸಭೆಯಲ್ಲಿ ಹಲವಾರು ವಿಚಾರಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಮಾತನಾಡಿ, ಮಹದಾಯಿ ವಿಚಾರವಾಗಿ ಈ ಸಭೆ ಮೊದಲ ದಿಟ್ಟ ಹೆಜ್ಜೆಯಾಗಿದ್ದು, ಮಹದಾಯಿ ಸಮಸ್ಯೆಯ ಪರಿಹಾರಕ್ಕೆ ತಾರ್ತಿಕ ಅಂತ್ಯ ಹಾಕಲು ಈ ಸಭೆ ಮಹತ್ವವನ್ನು ಪಡೆದಿದೆ ಎಂದರು.

ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ, ಮಹದಾಯಿ ಯೋಜನೆ ವಿಚಾರವಾಗಿ ಕರೆದಿರುವ ಜನಪ್ರತಿನಿಧಿಗಳ ಸಭೆಯಲ್ಲಿ ಸರ್ವಪಕ್ಷಗಳ ಜನಪ್ರತಿನಿಧಿಗಳು ಭಾಗಿಯಾಗಿದ್ದು, ಪಕ್ಷಾತೀತವಾಗಿ ಕೆಲಸ ಮಾಡಲು ಈ ಸಭೆ ಸಹಾಯಕಾರಿ ಆಗಿದೆ. ಸಿದ್ದರಾಮಯ್ಯನವರು ಕೂಡಾ ಸಭೆಯ ತೀರ್ಮಾನಕ್ಕೆ ಒಪ್ಪಿಗೆ ಸೂಚಿಸಿದ್ದು, ಎಲ್ಲ ಶಾಸಕರು ಮಹದಾಯಿ ವಿಚಾರವಾಗಿ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ಅಂತಿಮ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ಪಕ್ಷಾತೀತವಾಗಿ ಯಾವುದೇ ದೋಷಾರೋಪಣೆ ಮಾಡದೇ, ಪಕ್ಷಗತ ರಾಜನೀತಿ ಬಿಟ್ಟು ಒಟ್ಟಿಗೆ ಸೇರಿರುವುದು ಒಳ್ಳೆಯ ವಿಚಾರ ಎಂದರು.

ಸಭೆಯಲ್ಲಿ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರಸಾದ್ ಅಬ್ಬಯ್ಯ, ಆನಂದ್ ಮಾಮನಿ, ಎಂಎಲ್ ಸಿ ಶ್ರೀನಿವಾಸ್ ಮಾನೆ, ಪ್ರದೀಪ್ ಶೆಟ್ಟರ್, ಮಾಜಿ ಶಾಸಕ ಕೋನರೆಡ್ಡಿ, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *