ಬೆಂಗಳೂರು: `ದೋಸ್ತಿ’ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪತನದ ದಿನಗಳಿಗೆ ಕಾಯುತ್ತಾ ಆರು ಬಾರಿ ಈ ಯತ್ನಕ್ಕೆ ಕೈ ಹಾಕಿ ವಿಫಲರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಏಳನೇ ಕಾರ್ಯಾಚರಣೆಯಲ್ಲಿ ಕೊನೆಗೂ ಯಶಸ್ಸು ಕಂಡಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ, ನಾಲ್ಕನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಹೊಸ್ತಿಲಿಗೆ ಅವರು ಬಂದು ನಿಂತಂತಾಗಿದೆ.
2018ರಲ್ಲಿ 104 ಸ್ಥಾನ ಗೆದ್ದು ಮೇ ತಿಂಗಳಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ರಾಜೀನಾಮೆ ಕೊಟ್ಟಿದ್ದ ಯಡಿಯೂರಪ್ಪ 14 ತಿಂಗಳು ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು. ವಿಶ್ವಾಸಮತ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ನಾಲ್ಕು ದಿನಗಳ ಕಾಲ ಆಡಳಿತ ಪಕ್ಷದ ಸದಸ್ಯರಿಂದ ಹಿಗ್ಗಾ ಮುಗ್ಗಾ ಬೈಯಿಸಿಕೊಂಡು, ಮೌನಕ್ಕೆ ಶರಣಾಗಿದ್ದ ಬಿಜೆಪಿ ಪಡೆಯಲ್ಲಿ ಈಗ ಸಂತಸ ಮನೆ ಮಾಡಿದೆ.
105 ಸದಸ್ಯ ಬಲದೊಂದಿಗೆ ಗೆದ್ದು ಬೀಗಿರುವ ಬಿಎಸ್‍ವೈ, ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ, ನಾಳೆಯಿಂದ ಅಭಿವೃದ್ಧಿ ಪರ್ವ ಆರಂಭವಾಗಲಿದೆ. ರೈತರು ಬರಗಾಲಕ್ಕೆ ಸಿಕ್ಕಿ ತತ್ತರಿಸಿದ್ದಾರೆ. ಅವರ ರಕ್ಷಣೆಗೆ ಒತ್ತು ನೀಡಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪ್ರಮಾಣವಚನ:
ಗುರುವಾರ ಅಥವಾ ಶುಕ್ರವಾರ ಸಿಎಂ ಆಗಿ ಬಿಎಸ್ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗುರುವಾರ ಬೆಳಗ್ಗೆ 9.40 ರಿಂದ 10.30 ಅಥವಾ ಸಂಜೆ 4.30ರ ನಂತರ ಹಾಗೂ ಶುಕ್ರವಾರ ಮಧ್ಯಾಹ್ನ 2 ರಿಂದ 3 ಗಂಟೆ ಅಥವಾ ಸಂಜೆ 4.30ರ ನಂತರ ಅಂದರೆ, ಎರಡು ದಿನಾಂಕಗಳಲ್ಲಿ ನಾಲ್ಕು ಮುಹೂರ್ತವನ್ನ ಜ್ಯೋತಿಷಿಗಳು ನಿಗದಿ ಮಾಡಿದ್ದಾರಂತೆ. ಪಕ್ಷದ ಅಧ್ಯಕ್ಷ ಅಮಿತ್ ಶಾ, ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಮಾಡೋದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ನಾಯಕರು, ರಾಜ್ಯದಲ್ಲಿ ರಾಕ್ಷಸ ರಾಜ್ಯ ಅಂತ್ಯವಾಗಿದೆ. ಹೆಚ್‍ಡಿಕೆ ಸಹೋದರರು ಅಧಿಕಾರಕ್ಕೆ ಅಂಟಿಕೊಂಡಿದ್ದರು. ಸದ್ಯದಲ್ಲೇ ಹೊಸ ಸರ್ಕಾರ ಬರುತ್ತದೆ ಎಂದರು.
ಮೊದಲು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಒಬ್ಬರಿಂದಲೇ ಪ್ರಮಾಣ ವಚನ ನಡೆಯಲಿದ್ದು, ಆ ನಂತರ ವಿಶ್ವಾಸಮತ ಸಾಬೀತುಪಡಿಸಿ ಸಂಪುಟ ರಚನೆ ಮಾಡುತ್ತಾರೆ ಎನ್ನಲಾಗುತ್ತಿದೆ. ಇಂದು ರಾಜ್ಯಪಾಲರನ್ನು ಭೇಟಿ ಮಾಡಲಿರುವ ಬಿಜೆಪಿ ನಿಯೋಗ ಸರ್ಕಾರ ರಚಿಸಲು ಆಹ್ವಾನ ನೀಡುವಂತೆ ಮನವಿ ಮಾಡಲಿದ್ದಾರೆ.
ಈ ಮಧ್ಯೆ ದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕಾರ್ಯಾಧ್ಯಕ್ಷ ಜೆ.ಪಿ ನಡ್ಡಾ ರಾತ್ರಿಯೇ ಮಹತ್ವದ ಸಭೆ ನಡೆಸಿದರು. ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಉಭಯ ನಾಯಕರು ಮಾತುಕತೆ ನಡೆಸಿದರು. ಅಲ್ಲದೇ ಬಿಎಸ್‍ವೈಗೆ ದೆಹಲಿಗೆ ಬರುವಂತೆ ಬುಲಾವ್ ಕೂಡ ನೀಡಿದ್ದಾರೆ. ಹೀಗಾಗಿ ಯಡಿಯೂರಪ್ಪ ಇಂದು ದೆಹಲಿಗೆ ಹೋಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಇವತ್ತಿನಿಂದ ರಾಜ್ಯದಲ್ಲಿ ಕೇಸರಿ ಕಲರವ ಶುರುವಾಗಲಿದೆ.