ಹಿಜಬ್‍ಗೆ ಬ್ರೇಕ್ – ಏಕರೂಪ ವಸ್ತ್ರಸಂಹಿತೆ ಜಾರಿಮಾಡಿದ ಸರ್ಕಾರ

Public TV
1 Min Read

ಬೆಂಗಳೂರು: ರಾಜ್ಯದಲ್ಲಿ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಹಿಜಬ್ – ಕೇಸರಿ ಸಂಘರ್ಷಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇಷ್ಟು ದಿನ ಶಾಲೆಗಳಲ್ಲಿ ಮಾತ್ರವಿದ್ದ ವಸ್ತ್ರಸಂಹಿತೆಯನ್ನು ಪದವಿಪೂರ್ವ ಕಾಲೇಜುಗಳಿಗೂ ಸರ್ಕಾರ ವಿಸ್ತರಿಸಿದೆ.

ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಏಕರೂಪದ ವಸ್ತ್ರಸಂಹಿತೆಯನ್ನು ಜಾರಿ ಮಾಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 133ರ ಅನ್ವಯ ರಾಜ್ಯ ಸರ್ಕಾರದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದು ಕಂಡುಬಂದಿದ್ದು, ಇದರಿಂದ ಸಮಾನತೆ ಮತ್ತು ಏಕತೆಗೆ ಧಕ್ಕೆ ಬರುತ್ತಿರುವುದನ್ನು ಮನಗಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಇದನ್ನೂ ಓದಿ: ಕೇಂದ್ರದ ಬೇಟಿ ಬಚಾವೋ, ಬೇಟಿ ಪಡಾವೋ ಈಗ ಬೇಟಿ ಹಠಾವೋ ಆಗಿ ಬದಲಾಗುತ್ತಿದೆ: ಹೆಚ್‍ಡಿಕೆ

ಸರ್ಕಾರ ತಮ್ಮ ಆದೇಶವನ್ನು ಸಮರ್ಥಿಸಲು 2018ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ಆದೇಶವನ್ನು, ಕಾರ್ತಿಕ್ ಇಂಗ್ಲೀಷ್ ಸ್ಕೂಲ್‍ಗೆ ಸಂಬಂಧಿಸಿ ಬಾಂಬೇ ಹೈಕೋರ್ಟ್ ನೀಡಿದ್ದ ತೀರ್ಪನ್ನು, ತಮಿಳುನಾಡಿನ ಎಂಜಿಆರ್ ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದೆ. ಇದನ್ನೂ ಓದಿ: ಮನಸ್ಸಿಗೆ ಬಂದಂತೆ ಮಾಡಲು ಇದು ಪಾಕಿಸ್ತಾನ ಅಲ್ಲ: ಆರ್. ಅಶೋಕ್

ವಸ್ತ್ರಸಂಹಿತೆ ಬಗ್ಗೆ ಸರ್ಕಾರದ ಆದೇಶ ಏನು?
ಸ್ಕಾರ್ಫ್ ಧರಿಸಿದವರಿಗೆ ಶಾಲೆಗೆ ಬರದಂತೆ ನಿರ್ದೇಶಿಸಬಹುದು, ಇದು ಸಂವಿಧಾನದ 25ನೇ ಅನುಚ್ಛೇದದ ಉಲ್ಲಂಘನೆ ಅಲ್ಲ (ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ). ಎಲ್ಲಾ ಶಾಲೆ-ಕಾಲೇಜುಗಳಲ್ಲಿ ಸರ್ಕಾರ ನಿಗದಿಪಡಿಸಿದ ಸಮವಸ್ತ್ರ ಕಡ್ಡಾಯ. ಪದವಿ ಪೂರ್ವ ಕಾಲೇಜುಗಳು CDC ಸೂಚಿಸಿದ ಸಮವಸ್ತ್ರ ಧರಿಸಬೇಕು. ಖಾಸಗಿ ಶಾಲೆ-ಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿರ್ದೇಶಿಸಿದ ಸಮವಸ್ತ್ರ ಕಡ್ಡಾಯ. ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದಿದ್ದಲ್ಲಿ ಸಮಾನತೆ ಐಕ್ಯತೆ ಕಾಪಾಡಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪು ಧರಿಸಬೇಕು ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Share This Article
Leave a Comment

Leave a Reply

Your email address will not be published. Required fields are marked *