ಬೆಂಗಳೂರು: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದರಿಂದಾಗಿ ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಆಲಮಟ್ಟಿಯ ಲಾಲ್‍ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದು, ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಬಾಗಲಕೋಟೆಯಲ್ಲೂ ಪ್ರವಾಹ ಸೃಷ್ಟಿಸಿದೆ. ಜಮಖಂಡಿ ತಾಲುಕಿನ ಮುತ್ತೂರು ಗ್ರಾಮ ನಡುಗಡ್ಡೆಯಾಗಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಜಮಖಂಡಿ ತಾಲೂಕಿನ ತುಬಚಿ, ಶೂರ್ಪಾಲಿ ಗ್ರಾಮಗಳ ಸಂಚಾರ ಮಾರ್ಗ ಬಂದ್ ಮಾಡಲಾಗಿದೆ. ನಾರಾಯಣಪುರ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿದೆ. ರಾಯಚೂರು ತಾಲೂಕಿನ ಆತ್ಕೂರು ಹಾಗೂ ಕುರ್ವಾಕುಲ ನಡುಗಡ್ಡೆ ನಡುವಿನ ಸೇತುವೆ ಮುಳುಗಡೆಯಾಗಿವೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ 7 ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ ಎರಡು ಸೇತುವೆಗಳು ಜಲಾವೃತಗೊಂಡಿವೆ. ಚಿಕ್ಕೋಡಿ, ಅಥಣಿ, ರಾಯಭಾಗ ತಾಲೂಕಿನ ನದಿ ತೀರದ ಪ್ರವಾಹ ಭೀತಿ ಆವರಿಸಿದೆ.
ಜೊತೆಗೆ, ಪಶ್ಚಿಮ ತೀರ ರಾಜ್ಯಗಳಾದ ಗುಜರಾತ್, ರಾಜಸ್ಥಾನದ ಜೊತೆಗೆ ಪಂಜಾಬ್‍ನ ಲೂದಿಯಾನ ಹಾಗೂ ಪಾಕಿಸ್ತಾನದ ಬಂದರು ನಗರಿ ಕರಾಚಿಯಲ್ಲೂ ಪ್ರವಾಹ ಪರಿಸ್ಥಿತಿ ಇದೆ. ವಡೋದರಾದಲ್ಲಿ ರಸ್ತೆಗಳಲ್ಲೇ ಸೊಂಟದವರೆಗೆ ನೀರು ತುಂಬಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ.
ಮೊಸಳೆಗಳು ಸಹ ಜನನಿಬಿಡ ಪ್ರದೇಶಕ್ಕೆ ನುಗ್ಗಿದ್ದು, ಜನರಲ್ಲಿ ಆತಂಕ ಮೂಡಿಸಿವೆ. ಇದುವರೆಗೂ 5 ಮಂದಿ ಜಲಸಮಾಧಿಯಾಗಿದ್ದಾರೆ. ರಾಜಸ್ಥಾನದ ಅಜ್ಮೇರ್, ಬಿಕಾನೇರ್‍ಗಳಲ್ಲಿ ಅಕ್ಷರಶಃ ಪ್ರವಾಹ. ನೀರಿನ ರಭಸಕ್ಕೆ ಮನುಷ್ಯರೇ ಕೊಚ್ಚಿ ಹೋಗುತ್ತಿದ್ದಾರೆ. ಅಂಗಡಿಮುಂಗಟ್ಟುಗಳು, ಬೈಕ್‍ಗಳು ನೀರಿನಲ್ಲಿ ತರಗೆಲೆಗಳಂತೆ ತೇಲುತ್ತಿವೆ. ಭಾರೀ ಮಳೆಗೆ ಮನೆಗಳೇ ಕುಸಿದಿವೆ. ವರ್ಷಧಾರೆಗೆ ಇಲ್ಲೂ ಸಹ 6 ಮಂದಿ ಕೊಚ್ಚಿಹೋಗಿದ್ದಾರೆ.