ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- ಮಧ್ವರಾಜ್ ವಾರ್ಡ್ ನಲ್ಲೇ ಕಾಂಗ್ರೆಸ್ಸಿಗೆ ಸೋಲು

Public TV
2 Min Read

ಉಡುಪಿ: ಇಂದು ಕುತೂಹಲದಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ವಿಶೇಷ ಏನೆಂದರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ.

ಉಡುಪಿ ನಗರಸಭೆ
ಉಡುಪಿ ನಗರಸಭೆಯಲ್ಲಿ ಬಿಜೆಪಿ ಪಾರಮ್ಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ನಿಂದ ಅಧಿಕಾರವನ್ನು ಕಸಿದುಕೊಂಡಿದೆ. ಉಡುಪಿ ನಗರಸಭೆ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು. ಈ ನಗರ ಸಭೆ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ದೇಶದಲ್ಲೇ ಬಿಜೆಪಿಗೆ ಪ್ರಥಮ ಅಧಿಕಾರ ಕೊಟ್ಟಿದೆ. ಈ ನಗರಸಭೆಯಲ್ಲಿ 1968 ರಲ್ಲಿ ಜನಸಂಘ ಅಧಿಕಾರ ಹಿಡಿದಿತ್ತು. ಆದರೆ ಈಗ ಸುವರ್ಣ ವರ್ಷದಲ್ಲಿ ಬಿಜೆಪಿಗೆ ಗೆಲುವು ಲಭಿಸಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೆ ಭಾರೀ ಮುಖಭಂಗವಾಗಿದ್ದು, ಪ್ರಮೋದ್ ಮಧ್ವರಾಜ್ ವಾರ್ಡ್ ನಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ನಗರಸಭಾ ಮಾಜಿ ಅಧ್ಯಕ್ಷೆ ಮೀನಾಕ್ಷಿ ಬನ್ನಂಜೆಗೆ ಸೋಲಾಗಿದೆ. ಈ ನಗರ ಸಭೆಯಲ್ಲಿ ಬಿಜೆಪಿ 31 ಮತ್ತು ಕಾಂಗ್ರೆಸ್4 ಸ್ಥಾನಗಳನ್ನು ಗಳಿಸಿದೆ.

ಕುಂದಾಪುರ ಪುರಸಭೆ
ಈ ಪುರಸಭೆಯಲ್ಲಿ ಬಿಜೆಪಿ 14, ಕಾಂಗ್ರೆಸ್ 8 ಮತ್ತು ಪಕ್ಷೇತರ 1 ಗೆಲವು ಸಾಧಿಸಿದ್ದು, ಬಿಜೆಪಿ ಅಧಿಕಾರಕ್ಕೆ ಏರಲಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ರಾಜೇಶ್ ಕಾವೇರಿಗೆ ಬಿಜೆಪಿಯೆದುರು ಸೋಲಾಗಿದ್ದು, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತೆ ಮೇಲುಗೈ ಸಾಧಿಸಿದ್ದಾರೆ. ಇದರಿಂದ ಎಂಎಲ್‍ಸಿ ಪ್ರತಾಪ್ ಚಂದ್ರ ಶೆಟ್ಟಿಗೆ ಮುಖಭಂಗವಾಗಿದೆ.

ಕಾರ್ಕಳ ಪುರಸಭೆ
ಈ ಪುರಸಭೆ ಫಲಿತಾಂಶ ಅತಂತ್ರವಾಗಿ ಬಂದಿದ್ದು, ಕಾಂಗ್ರೆಸ್ ಬಿಜೆಪಿಗೆ ಸಮಬಲ ಫಲಿತಾಂಶ ಬಂದಿದೆ. ಬಿಜೆಪಿ 11, ಕಾಂಗ್ರೆಸ್ 11 ಮತ್ತು ಪಕ್ಷೇತರ 1 ಸ್ಥಾನವನ್ನು ಪಡೆದುಕೊಂಡಿದೆ. ಈ ಚುನಾವಣೆಯಲ್ಲಿ ಶಾಸಕರು, ಸಂಸದರಿಗೆ ಮತ ಚಲಾಯಿಸುವ ಹಕ್ಕು ಇದ್ದು, ಬಿಜೆಪಿ ಶಾಸಕರ ಮತ್ತು ಸಂಸದರ ಮತ ಬಳಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಈಗ ಪಕ್ಷೇತರ ವಿಜಯಿ ಲಕ್ಷ್ಮೀನಾರಾಯಣ ಮಲ್ಯ ಅವರ ಬೆಂಬಲ ಬಿಜೆಪಿಗೆ ಸಿಗಲಿದೆ ಎಂದು ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಾಲಿಗ್ರಾಮ ಪಟ್ಟಣ ಪಂಚಾಯತ್
ಸಾಲಿಗ್ರಾಮ ಪಟ್ಟಣ ಪಂಚಾಯತ್ ನಲ್ಲಿ ಬಿಜೆಪಿ 10, ಕಾಂಗ್ರೆಸ್ 5 ಹಾಗು ಪಕ್ಷೇತರ 1 ಸ್ಥಾನವನ್ನು ಗಳಿಸಿದ್ದು, ಒಂದು ಅಂಚೆ ಮತದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇವರು ಪುನೀತ್ ಪೂಜಾರಿ 4ನೇ ವಾರ್ಡ್ ಅಭ್ಯರ್ಥಿಯಾಗಿದ್ದಾರೆ.

ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಶೇಕಡಾ 67.51ರಷ್ಟು ಮತದಾನವಾಗಿತ್ತು. ಒಟ್ಟು 2634 ವಾರ್ಡ್‍ಗಳಲ್ಲಿ ಚುನಾವಣೆ ನಡೆದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *