ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇವತ್ತಿಗೆ ಸರಿಯಾಗಿ 20 ದಿನ ಬಾಕಿಯಿದೆ. ಈ ಹೊತ್ತಲ್ಲಿ ಪ್ರಚಾರದ ಭರಾಟೆ ಬದಲಿಗೆ ಐಟಿ ರೇಡ್ ರಾಜಕೀಯ ನಡೆದಿದೆ. ಇಂದು ಬೆಳಗಿನ ಜಾವ ಮಂಡ್ಯ, ಮೈಸೂರು, ಹಾಸನದಲ್ಲಿ ಜೆಡಿಎಸ್ ನಾಯಕರು, ಸಂಬಂಧಿಕರ ಮೇಲೆ ಐಟಿ ದಾಳಿ ಆಗಿದೆ.
ಹಾಸನ ಜಿಲ್ಲೆಯಲ್ಲೇ 6 ಕಡೆ ದಾಳಿ ಆಗಿದೆ. ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರ ಆಪ್ತ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದಿದೆ. ಚನ್ನರಾಯಪಟ್ಟಣದಲ್ಲಿ 3 ಕಡೆ, ಹಾಸನ, ಶ್ರವಣಬೆಳಗೊಳ ಮತ್ತು ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣದಲ್ಲಿ ಮುಂಜಾನೆಯಿಂದಲೇ ದಾಳಿ ನಡೆಸಿ ಸರ್ಚಿಂಗ್, ಪರಿಶೀಲನೆ ನಡೆದಿದೆ.
ಐಟಿ ದಾಳಿ ನಡೆದಿದ್ದೇಲ್ಲಿ?
1. ಸಿ.ಎಸ್.ಪುಟ್ಟರಾಜು, ಸಚಿವ, ಚಿನಕುರಳಿ, ಮಂಡ್ಯ: ಬೆಳಗ್ಗೆ ಸುಮಾರು 5.30ಕ್ಕೆ ಇನ್ನೋವಾ ಕಾರಿನಲ್ಲಿ ಆಗಮಿಸಿದ ನಾಲ್ವರು ಅಧಿಕಾರಿಗಳಿಂದ ಪರಿಶೀಲನೆ ಮುಂದುವರಿದಿದೆ.
2. ಅಶೋಕ್: ಸಚಿವ ಪುಟ್ಟರಾಜು ಅಣ್ಣನ ಮಗ: : ಬೆಳಗ್ಗೆ ಸುಮಾರು 5.30ಕ್ಕೆ ಮೈಸೂರಿನ ವಿಜಯನಗರದಲ್ಲಿರುವ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.
3. ಮಂಜುನಾಥ್, ಎಕ್ಸಿಕ್ಯೂಟಿವ್ ಎಂಜಿಯರ್: ಸಚಿವ ಪುಟ್ಟರಾಜು ಅವರ ಸಂಬಂಧಿಯಾಗಿರುವ ಮಂಜುನಾಥ್ ಹಾಸನದಲ್ಲಿಯ ವಿದ್ಯಾನಗರದ ಮನೆಗೆ ಬೆಳಗಿನ ಜಾವ ಇನ್ನೋವಾ ಕಾರಿನಲ್ಲಿ ಬಂದ ನಾಲ್ವರು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಿವಿಧ ರಸ್ತೆ ಕಾಮಗಾರಿಗಳ ಹಂಚಿಕೆ, ಹಣ ಬಿಡುಗಡೆ ಕಡತ ಪರಿಶೀಲನೆ ನಡೆಸುತ್ತಿದ್ದಾರೆ.
4. ರಾಯಿಗೌಡ, ಅಶ್ವತ್ಥ್, ನಾರಾಯಣರೆಡ್ಡಿ ಪಿಡಿಬ್ಲ್ಯೂಡಿ ಗುತ್ತಿಗೆದಾರರ ನಿವಾಸಗಳ ಮೇಲೆ ದಾಳಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಐಟಿ ದಾಳಿ ನಡೆದಿದ್ದು, ಇವರನ್ನು ಸಚಿವ ಹೆಚ್.ಡಿ.ರೇವಣ್ಣರ ಬೆಂಬಲಿಗರು ಎಂದು ತಿಳಿದುಬಂದಿದೆ.
5. ಅಬ್ದುಲ್ ಹಫೀಜ್: ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿದ್ದು, ಶ್ರವಣಬೆಳಗೊಳದಲ್ಲಿ ದಾಳಿ ನಡೆದಿದೆ.
6. ಶಿವಮೂರ್ತಿ: ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿಗರುವ ಶಿವಮೂರ್ತಿ ಅವರ ಮಲ್ಲಿಪಟ್ಟಣ, ಅರಕಲಗೂಡು ನಿವಾಸಗಳ ಮೇಲೆ ದಾಳಿ ನಡೆದಿದೆ. ಶಿವಮೂರ್ತಿ ಸಚಿವ ರೇವಣ್ಣರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಜೆಡಿಎಸ್ ಬೆಂಬಲಿಗರಾಗಿದ್ದಾರೆ.
7. ಶೃತಿ ಮೋಟಾರ್ಸ್, ನೆಕ್ಸಾ ಶೋ ರೂಂ: ಶಿವಮೊಗ್ಗ ನಗರದ ಶಂಕರಮಠ ರಸ್ತೆಯಲ್ಲಿರುವ ಶೋ ರೂಂ ಇದಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಸಂಬಂಧಿ ಮಾಲೀಕರಾಗಿದ್ದಾರೆ. ಇಲ್ಲಿಯ ಐಟಿ ಪರಿಶೀಲನೆ ಸಂಜೆ ಮುಗಿದಿದೆ.
8. ಸಿ.ಎಚ್ ವೆಂಕಟರಮಣ: ಪಿಡಬ್ಲ್ಯೂಡಿ ಕ್ಲಾಸ್ ಒನ್ ಗುತ್ತಿಗೆದಾರರಾಗಿರುವ ವೆಂಕಟರಮಣ್ ಅವರ ಚಿಕ್ಕಮಗಳೂರಿನ ಚನ್ನಾಪುರದ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ. ನಾಲ್ವರು ಅಧಿಕಾರಿಗಳಿಂದ ದಾಖಲಾತಿಯ ಪರಿಶೀಲನೆ ನಡೆದಿದೆ.
9. ತಹಶೀಲ್ದಾರ್ ಕಚೇರಿ: ರಾಮನಗರ ಜಿಲ್ಲೆಯ ಕನಕಪುರದ ತಹಶೀಲ್ದಾರ ಕಚೇರಿಯ ಮೇಲೆ ಐಟಿ ದಾಳಿ ನಡೆದಿತ್ತು. ಬೆಳಗ್ಗೆ 10.30 ಸುಮಾರಿಗೆ ಆಗಮಿಸಿದ ಐಟಿ ತಂಡ ಮಧ್ಯಾಹ್ನ 2.30ಕ್ಕೆ ಕಚೇರಿಯಿಂದ ನಿರ್ಗಮಿಸಿದೆ. ಸಚಿವ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮರಿಗೆ ಸೇರಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
10. ಮೇಲುಕೋಟೆ ಕಾಂಗ್ರೆಸ್ ಮುಖಂಡ: ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷರಾದ ರೇವಣ್ಣರ ನಿವಾಸ ಮೇಲೆ ದಾಳಿ ನಡೆದಿತ್ತು.