ಗ್ಯಾರಂಟಿ ಸರ್ಕಾರದಿಂದ ಶಾಕ್‌ – ಡೀಸೆಲ್‌ ದರ 2 ರೂ. ಏರಿಕೆ

Public TV
1 Min Read

ಬೆಂಗಳೂರು: ಗ್ಯಾರಂಟಿ ಸರ್ಕಾರ  ಪ್ರತಿ ಲೀಟರ್‌ ಡೀಸೆಲ್‌  ಬೆಲೆಯನ್ನು 2 ರೂ. ಏರಿಕೆ ಮಾಡಿದೆ.  ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಜನತೆಗೆ ಕಾಂಗ್ರೆಸ್‌ ಸರ್ಕಾರ ಮತ್ತೊಂದು ಶಾಕ್‌ ನೀಡಿದ್ದುಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಡೀಸೆಲ್‌ ಮೇಲಿನ ಮಾರಾಟ ತೆರಿಗೆಯನ್ನು 18.44%  ರಿಂದ  21.17% ಗೆ ಏರಿಕೆ ಮಾಡಲಾಗಿದೆ. ಸದ್ಯ ರಾಜ್ಯದಲ್ಲಿ ಪ್ರತಿ ಲೀಟರ್‌ ಡೀಸೆಲ್‌ಗೆ 88.93 ರೂ. ದರವಿದೆ. ತೆರಿಗೆ ಏರಿಕೆಯಿಂದ ದರ  90.93 ರೂ.ಗೆ ಆಗಲಿದೆ.  ಪೆಟ್ರೋಲ್‌ ಮೇಲೆ ಮಾರಾಟ ತೆರಿಗೆಯನ್ನು ಏರಿಸದ ಕಾರಣ  ಪ್ರತಿ ಲೀಟರ್‌ ಪೆಟ್ರೋಲ್‌ ದರ 102. 84  ರೂ.(ನಗರದಿಂದ ನಗರಕ್ಕೆ ದರ ಬದಲಾಗುತ್ತದೆ) ಇರಲಿದೆ.

ಸರಕು ಸಾಗಾಣಿಕೆ ಮಾಡುವ ವಾಹನಗಳಾದ ಟ್ರಕ್‌, ಲಾರಿಗಳು ಡೀಸೆಲ್‌ ಬಳಸುವ ಕಾರಣ ಮುಂದಿನ ದಿನಗಳಲ್ಲಿ ಇದರ ನೇರ ಪರಿಣಾಮ ದಿನ ಬಳಕೆಯ ವಸ್ತುಗಳ ಮೇಲೆ ತಟ್ಟಲಿದೆ. ಇದರಿಂದಾಗಿ ದಿನ ಬಳಕೆ ತರಕಾರಿ, ಆಹಾರ ವಸ್ತುಗಳ ಬೆಲೆಯೂ ಏರಿಕೆ ಆಗಲಿದೆ.

ಕಳೆದ ಜೂನ್‌ನಲ್ಲಿ ಏರಿಕೆ:
2024ರ ಜೂನ್‌ ನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 3.02 ರೂ. ಹಾಗೂ ಡೀಸೆಲ್‌ ಬೆಲೆಯಲ್ಲಿ 3 ರೂ. ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳದಿಂದ ಪೆಟ್ರೋಲ್‌ ದರ 102.84 ರೂ. ಆಗಿದ್ದರೆ ಡಿಸೇಲ್‌ ದರ 89.79 ರೂ.ಗೆ ಏರಿಕೆಯಾಗಿತ್ತು. ಈ ದರ ಏರಿಕೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗೆ ಹಣವಿಲ್ಲ ಎಂದು ತೈಲ ಬೆಲೆ ಏರಿಸಿಲ್ಲಎಂಬುದಾಗಿ ಸಮರ್ಥಿಸಿಕೊಂಡಿದ್ದರು.

ಲೋಕಸಭೆ ಚುನಾವಣೆ ಘೋಷಣೆಯಾಗುವ ಮುನ್ನ ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವು ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು 2 ರೂ. ಇಳಿಕೆ ಮಾಡಿತ್ತು. ಇಳಿಕೆ ಮಾಡಿದ ನಂತರ ಕರ್ನಾಟಕದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 99.83 ರೂ. ಆಗಿದ್ದರೆ ಡೀಸೆಲ್‌ ದರ 85.93 ರೂ. ಇತ್ತು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ 3.02 ರೂ. ಏರಿಕೆ ಮಾಡಿದ್ದರೆ ಡೀಸೆಲ್‌ ದರ 5 ರೂ. ಏರಿಕೆ ಮಾಡಿದೆ.

Share This Article