ಹಿಜಬ್‌- ಕೇಸರಿ ಫೈಟ್‌ಗೆ ತಾತ್ಕಾಲಿಕ ಬ್ರೇಕ್‌ – ಹೈಕೋರ್ಟ್‌ ಕಲಾಪದ ಪೂರ್ಣ ಪಾಠ ಇಲ್ಲಿದೆ

Public TV
3 Min Read

ಬೆಂಗಳೂರು: ರಾಜ್ಯದಲ್ಲಿ ಹಿಜಬ್-ಕೇಸರಿ ಫೈಟ್‍ಗೆ ಹೈಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ. ಇವತ್ತು ಎರಡೂವರೆ ಗಂಟೆ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ತ್ರಿಸದಸ್ಯ ಪೀಠ, ಮುಂದಿನ ಮುಂದಿನ ಆದೇಶ ನೀಡುವವರೆಗೆ ಕಾಲೇಜು ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ವಸ್ತ್ರ ಬಳಸಬಾರದೆಂದು ಸೂಚನೆ ನೀಡಿದೆ.

ಇಂದು ಹಿಜಬ್ ವಿವಾದಕ್ಕೆ ಸಂಬಂಧಿಸಿ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾ.ಕೃಷ್ಣ ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನಿಸಾ ಅವರ ತ್ರಿಸದಸ್ಯ ಪೀಠ ಐದು ಅರ್ಜಿಗಳ ವಿಚಾರಣೆ ನಡೆಸಿತು.

ಹೈಕೋರ್ಟ್ ಸೂಚನೆ ಅನ್ವಯ, ಹಿಜಬ್ ಅಥವಾ ಕೇಸರಿ ಶಾಲುಗಳನ್ನು ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ. ಸದ್ಯಕ್ಕೆ ಯಥಾಸ್ಥಿತಿ ಕಾಪಾಡಲು ಕೋರ್ಟ್ ಸೂಚಿಸಿದ್ದು, ಸಮವಸ್ತ್ರ ಧರಿಸಿಯೇ ಕಾಲೇಜಿಗೆ ಹಾಜರಾಗಬೇಕಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲೆ-ಕಾಲೇಜು ಪುನಾರಂಭ ಮಾಡುವಂತೆ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ. ಇದು ಅಂತಿಮ ಆದೇಶವಲ್ಲ ಅಂತ ಕೋರ್ಟ್ ಸ್ಪಷ್ಟಪಡಿಸಿದ್ದು, ಸೋಮವಾರದಿಂದ ಪ್ರತಿನಿತ್ಯ ವಿಚಾರಣೆ ನಡೆಸಿ ಆದೇಶ ನೀಡುವುದಾಗಿಯೂ ತಿಳಿಸಿದೆ. ಇದನ್ನೂ ಓದಿ: ರಾಷ್ಟ್ರವೋ ಅಥವಾ ಧರ್ಮ ಯಾವುದು ಮುಖ್ಯ: ಹಿಜಬ್ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ಪ್ರಶ್ನೆ

ನ್ಯಾಯಪೀಠದ ಮೌಖಿಕ ಸೂಚನೆಗೆ ಅರ್ಜಿದಾರರ ಪರ ವಕೀಲ ದೇವದತ್‌ ಕಾಮತ್ ಆಕ್ಷೇಪ ವ್ಯಕ್ತಪಡಿಸಿದರು. ಕೂಡಲೇ ನ್ಯಾಯಪೀಠ, ಈ ವಿವಾದ ಇತ್ಯರ್ಥ ಆಗಬೇಕು ಎಂದಿದ್ದರೆ ನಮಗೆ ಸಹಕರಿಸಿ. ಸೋಮವಾರದ ವಿಚಾರಣೆ ವೇಳೆ ನಿಮ್ಮ ಆಕ್ಷೇಪಗಳನ್ನು ದಾಖಲಿಸಿ ಎಂದು ಹೇಳಿತು.

ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಿತ್ತು. ಮುಖ್ಯ ನ್ಯಾಯಮೂರ್ತಿಗಳು ಪರಿಸ್ಥಿತಿ ಅರಿತು ಕೂಡಲೇ ತಮ್ಮನ್ನು ಒಳಗೊಂಡಂತೆ ಮೂವರು ನ್ಯಾಯಮೂರ್ತಿಗಳ ವಿಸ್ತೃತ ಪೀಠವನ್ನು ರಚಿಸಿದ್ದರು.

ಮೌಖಿಕ ಸೂಚನೆ ಏನು?
ಸದ್ಯಕ್ಕೆ ಶಾಲೆ ಕಾಲೇಜು ಆರಂಭವಾಗಲಿ. ಆದರೇ ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಧಾರ್ಮಿಕ ವಸ್ತ್ರ ಧರಿಸಿ ತರಗತಿಗೆ ಹಾಜರಾಗುಂತಿಲ್ಲ. ಕೇಸರಿ ಶಾಲು, ಹೆಡ್ ಸ್ಕಾರ್ಫ್, ಇನ್ನಿತರೇ ಧಾರ್ಮಿಕ ಅಸ್ತ್ರ ಧರಿಸಬಾರದು.

ಯಾರೂ ಕೂಡ ಧಾರ್ಮಿಕತೆ ಬಿಂಬಿಸುವ ವಸ್ತ್ರ ಧರಿಸುತ್ತೇವೆ ಎಂದು ಪಟ್ಟು ಹಿಡಿಯುವಂತಿಲ್ಲ. ನಾವು ಎರಡು ಕಡೆಯವರಿಗೂ ಈ ಸೂಚನೆ ನೀಡುತ್ತಿದ್ದೇವೆ. ನಮಗೆ ಶಾಂತಿ ಸೌಹಾರ್ದತೆ ಕಾಪಾಡುವುದು ಮುಖ್ಯ. ಆದಷ್ಟು ಬೇಗ ನಾವು ಈ ಪ್ರಕರಣವನ್ನು ಇತ್ಯರ್ಥ ಮಾಡುತ್ತೇವೆ. ವಿಚಾರಣೆ ನಡೆಯುವಾಗ ಶಿಕ್ಷಣ ಸಂಸ್ಥೆಗಳಿಗೆ ಧಾರ್ಮಿಕ ಉಡುಪು ಧರಿಸಲು ನಿರ್ಬಂಧ ವಿಧಿಸುತ್ತಿದ್ದೇವೆ. ಇದನ್ನೂ ಓದಿ: ಡಿಕೆಶಿ ಪಾಕಿಸ್ತಾನ ಪರ ಹೇಳಿಕೆ ಕೊಡುವವರ ಪರವೋ ಅಥವಾ ಭಾರತ ಮಾತೆಯ ಪರವೋ: ರೇಣುಕಾಚಾರ್ಯ

ವಕೀಲ ದೇವದತ್ ಕಾಮತ್, ಸಂಜಯ್ ಹೆಗ್ಡೆ ವಾದ ಏನಿತ್ತು?
ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಪ್ರಕಾರ ಸಮವಸ್ತ್ರ ಕಡ್ಡಾಯ ಅಲ್ಲ. ಪ್ರಾಥಮಿಕ ಶಾಲೆಗಳಲ್ಲಿ ಸಮವಸ್ತ್ರ ಇರಬೇಕು. ಕಾಲೇಜಿಗೆ ಅಗತ್ಯವಿಲ್ಲ. 2 ವರ್ಷದಿಂದ ನಮ್ಮ ವಿದ್ಯಾರ್ಥಿಗಳು ಹಿಜಬ್ ಧರಿಸಿ ಕಾಲೇಜಿಗೆ ಹೋಗುತ್ತಿದ್ದರು. ಕಾಲೇಜಿನಲ್ಲಿ ಸಮವಸ್ತ್ರ ಎನ್ನುವುದು ಇತ್ತೀಚಿನ ಬೆಳವಣಿಗೆ ಅಷ್ಟೇ.

ವಿವಾದ ಆದ ಮೇಲೆ ಸರ್ಕಾರ ಆದೇಶ ಹೊರಡಿಸಿದೆ.ಇದರ ಉದ್ದೇಶ ಏನು? ಆದೇಶದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲೇಖಿಸಿದ್ದಾರೆ. ಈ ವೇಳೆ ಮುಖ್ಯ ನ್ಯಾಯಮೂರ್ತಿಗಳು ಸರ್ಕಾರ ಕೋರ್ಟ್ ಆದೇಶ ಉಲ್ಲೇಖಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮನವಿ ಇಷ್ಟೇ. ಸರ್ಕಾರಕ್ಕೆ ಆದೇಶ ಮಾಡುವ ಅಧಿಕಾರ ಇಲ್ಲ. ತಮಿಳುನಾಡು ಶಿಕ್ಷಣ ಕಾಯ್ದೆಯನ್ನು ಇಲ್ಲಿಗೆ ತರುವ ಪ್ರಯತ್ನ ನಡೆದಿದೆ ಎಂದು ಉತ್ತರಿಸಿದರು.

ಈ ವಿವಾದ ಶುರುವಾದ ಮೇಲೆ ಶಾಲು ಹಾಕೋಕೆ ಶುರು ಮಾಡಿದ್ದಾರೆ. ಮಕ್ಕಳು ಸಮವಸ್ತ್ರ ಬಣ್ಣದ ಹಿಜಬ್ ಧರಿಸುತ್ತಿದ್ದಾರೆ. ಇದರಿಂದ ಯಾರಿಗೂ ತೊಂದರೆ ಇಲ್ಲ. ಆದರೂ, ಕಳೆದ ವಾರದಿಂದ ವಿದ್ಯಾರ್ಥಿನಿಯರನ್ನು ಕಾಲೇಜಿಗೆ ಬಿಟ್ಟುಕೊಳ್ಳುತ್ತಿಲ್ಲ. ನಮಗೆ ಆ ಮಕ್ಕಳ ಹೋರಾಟ ನೋಡಲು ಆಗುತ್ತಿಲ್ಲ. ಮಕ್ಕಳು ಶಾಲೆಯಿಂದ ಹೊರಗೆ ಇದ್ದಾರೆ. ಮಧ್ಯಂತರ ಆದೇಶ ನೀಡಿ ಎಂದು ಮನವಿ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *