ನಲಪಾಡ್ ಜಾಮೀನು ಅರ್ಜಿ ವಜಾಗೊಂಡಿದ್ದು ಯಾಕೆ? ನ್ಯಾಯಾಧೀಶರು ಕೊಟ್ಟ ಕಾರಣಗಳು ಇಲ್ಲಿದೆ

Public TV
2 Min Read

ಬೆಂಗಳೂರು: ಯುವಕ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಜಾಮೀನು ಅರ್ಜಿ ಹೈಕೋರ್ಟ್ ನಲ್ಲಿ ವಜಾ ಆಗಿದೆ.

ಯಾವೆಲ್ಲ ಅಂಶಗಳನ್ನು ಪರಿಗಣಿಸಿ ನ್ಯಾ. ಶ್ರೀನಿವಾಸ್ ಹರೀಶ್ ಅವರಿದ್ದ ಏಕಸದಸ್ಯ ಪೀಠ ಜಾಮೀನು ಅರ್ಜಿಯನ್ನು ವಜಾಗೊಳಿಸಿತು ಎನ್ನುವುದನ್ನು ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಕೋರ್ಟ್ ಹೇಳಿದ್ದು ಏನು?
ವಿದ್ವತ್ ಮೇಲೆ ಹಲ್ಲೆಯಾದಾಗ ನಲಪಾಡ್ ಅಲ್ಲಿ ಇರಲೇ ಇಲ್ಲ. ಅವರು ಹೊಡೆದಿಲ್ಲ. 10-15 ಜನ ಹೊಡೆದಿದ್ದಾರೆ ಅಂತ ಎಫ್‍ಐಆರ್ ನಲ್ಲಿದೆ ಬಿಟ್ಟರೇ ಅವರೇ ಹೊಡೆದಿದ್ದಾರೆ ಎಂದು ನೇರವಾದ ಹೇಳಿಕೆಯಿಲ್ಲ ಅಂತ ಆರೋಪಿ ನಲಪಾಡ್ ಪರ ವಕೀಲ ವಾದ ಮಾಡಿದ್ದಾರೆ. ಆದ್ರೆ ಸಿಸಿಟಿವಿ ದೃಶ್ಯಾವಳಿ ನೋಡಿದಾಗ ವಿದ್ವತ್ ಮೇಲೆ ಘೋರ ಹಾಗೂ ಭಯಾನಕವಾಗಿ ಹಲ್ಲೆ ನಡೆದಿರುವುದು ನ್ಯಾಯಾಧೀಶರ ಗಮನಕ್ಕೆ ಬಂದಿದೆ. ಹಲ್ಲೆ ಮಾಡುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ನೋಡುತ್ತಿದ್ದರೇ ವಿನಃ ಯಾರು ವಿದ್ವತ್ ಸಹಾಯಕ್ಕೆ ಬರಲಿಲ್ಲ. ನಲಪಾಡ್ ಅವರು ಅಲ್ಲಿ ತೋರಿದ ದರ್ಪದಿಂದಾಗಿ ಭಯಗೊಂಡು ಯಾರೊಬ್ಬರೂ ಸಹಾಯಕ್ಕೆ ಬರದಿರುವುದು ಕಾರಣವಾಗಿದೆ. ಹೀಗಾಗಿ ಇದೊಂದು ಘೋರವಾದ ಪ್ರಕರಣವಾಗಿದೆ.

 

ಘಟನೆ ನಡೆದಂದೇ ರಾತ್ರಿ 11.45ರ ಸುಮಾರಿಗೆ ದೂರು ದಾಖಲಾದ್ರೂ ಕೂಡ ಬೆಳಗ್ಗಿನ ಜಾವ 3.30ರವರೆಗೂ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿಲ್ಲ. ಮಾರಣಾಂತಿಕ ಹಲ್ಲೆ ನಡೆದರೂ ಎಫ್‍ಐಆರ್ ದಾಖಲಿಸಲು ವಿಳಂಬ ಮಾಡಿದ್ದು ಯಾಕೆ ಎನ್ನುವುದಕ್ಕೆ ಪೊಲೀಸರು ಯಾವುದೇ ಕಾರಣವನ್ನೂ ಕೂಡ ಕೊಟ್ಟಿಲ್ಲ. ಹೀಗಾಗಿ ಇದು ಆರೋಪಿ ತನ್ನ ಪ್ರಭಾವ ಬಳಸಿ ಎಫ್‍ಐಆರ್ ದಾಖಲಿಸಿಕೊಳ್ಳಲು ತಡಮಾಡಿರಬಹುದೆಂದು ನ್ಯಾಯಾಲಯ ಗಮನಿಸಿದೆ.

ಇಷ್ಟು ಮಾತ್ರವಲ್ಲದೇ ಅರುಣ್ ಬಾಬು ಎಂಬ ವ್ಯಕ್ತಿಯ ಕೈಯಿಂದ ಪ್ರತಿ ದೂರು ನೀಡಿ ಬೆಳಗ್ಗೆ 5.30 ಸುಮಾರಿಗೆ ಕೇಸ್ ದಾಖಲಿಸಿಕೊಂಡು, ನಂತರ 6 ಗಂಟೆ ಸುಮಾರಿಗೆ ಬೌರಿಂಗ್ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಿ ಮೆಡಿಕಲ್ ಸಮ್ಮರಿ ಮಾಡಿಸಿದ್ದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿದೆ.

ಈ ಪ್ರಕರಣವನ್ನು ಏನಾದ್ರೂ ಮಾಡಿ ಮುಚ್ಚಿಹಾಕಲು ಮಾಡಿದಂತಹ ಪ್ರಯತ್ನವಾಗಿದೆ. ಮಲ್ಯ ಆಸ್ಪತ್ರೆಯ ವೈದ್ಯ ಡಾ. ಆನಂದ್ ಅವರು ಕೂಡ ವಿದ್ವತ್ ಡಿಸ್ಚಾರ್ಜ್ ಸಮ್ಮರಿಯನ್ನು ಅಪಾದಿತರಿಗೆ ಅನುಕೂಲವಾಗುವಂತೆ ಅಸಾಮಾನ್ಯವಾಗಿ ಸೃಷ್ಟಿಸಿದ್ದಾರೆ ಎಂಬ ನಿಲುವನ್ನು ನ್ಯಾಯಾಲಯ ತೆಗೆದುಕೊಂಡಿದೆ. ಈ ಎಲ್ಲಾ ವಿಚಾರಗಳ ಆಧಾರದ ಮೇಲೆ ಹಾಗೂ ಸುಪ್ರೀಂ ಕೋರ್ಟ್ 2, 3 ತೀರ್ಪುಗಳನ್ನು ಉಲ್ಲೇಖಿಸಿ, ಒಂದು ವೇಳೆ ಜಾಮೀನು ಮಂಜೂರು ಮಾಡಿದ್ದಲ್ಲಿ ಆರೋಪಿ ಸಾಕ್ಷ್ಯವನ್ನು ನಾಶ ಮಾಡುವ ಸಾಧ್ಯತೆಯಿದೆ ಎನ್ನುವುದನ್ನು ಗಂಭೀರವಾಗಿ ಪರಿಗಣಿಸಿ ಜಾಮೀನು ನೀಡಲು ಕೋರ್ಟ್ ನಿರಾಕರಿಸಿದೆ ಎಂದು ಶ್ಯಾಮ್‍ಸುಂದರ್ ತಿಳಿಸಿದರು.

https://www.youtube.com/watch?v=1Lfn0Ovd27U

https://www.youtube.com/watch?v=tGbMJgI45Dc

Share This Article
Leave a Comment

Leave a Reply

Your email address will not be published. Required fields are marked *