– ವಿಜಯದಶಮಿ ಎಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ: ಹೈಕೋರ್ಟ್
ಬೆಂಗಳೂರು: ನಾಡಹಬ್ಬ ದಸರಾ (Dasara) ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ (Banu Mushtaq) ಆಯ್ಕೆ ವಿರೋಧಿಸಿ ಸಲ್ಲಿಸಿದ್ದ ಪಿಐಎಲ್ ಅರ್ಜಿಗಳನ್ನು ಹೈಕೋರ್ಟ್ (High Court) ವಜಾಗೊಳಿಸಿದೆ.
ಸರ್ಕಾರದ ಕ್ರಮ ಪ್ರಶ್ನಿಸಿ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಗಿರೀಶ್ ಕುಮಾರ್ ಮತ್ತು ಗೌರವ್ ಎಂಬವರು ಪಿಐಎಲ್ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಹೈಕೋರ್ಟ್ ಮುಖ್ಯ ನ್ಯಾ. ವಿಭು ಬಕ್ರು ಹಾಗೂ ನ್ಯಾ. ಸಿ.ಎಂ. ಜೋಶಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಬಳಿಕ ದಸರಾ ಉದ್ಛಾಟನೆಗೆ ಬಾನು ಮುಷ್ತಾಕ್ ಆಯ್ಕೆಯಿಂದ ಯಾವುದೇ ಹಕ್ಕು ಉಲ್ಲಂಘನೆಯಿಲ್ಲ ಎಂದು ಪಿಐಎಲ್ ಅರ್ಜಿಗಳನ್ನು ಪೀಠ ವಜಾಗೊಳಿಸಿತು. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ – ಹೈಕೋರ್ಟ್ ಮೆಟ್ಟಿಲೇರಿದ ಪ್ರತಾಪ್ ಸಿಂಹ
ವಿಜಯದಶಮಿ ಎಂದರೆ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ. ದೇಶಾದ್ಯಂತ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಪೀಠ ಈ ವೇಳೆ ಹೇಳಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಸುದರ್ಶನ, ಬಾನು ಮುಷ್ತಾಕ್ ಅವರು ಕನ್ನಡ ಮತ್ತು ಹಿಂದೂಗಳ ವಿರುದ್ಧವಾಗಿ ಮಾತನಾಡಿದ್ದಾರೆ. ಭುವನೇಶ್ವರಿ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕುಂಕುಮದ ಬಗ್ಗೆ ಮಾತನಾಡಿದ್ದಾರೆ. ಅವರ ಆಯ್ಕೆ ಸರಿಯಲ್ಲ ಎಂದು ವಾದ ಮಂಡಿಸಿದರು.
ಇದಕ್ಕೆ ನ್ಯಾಯಮೂರ್ತಿಗಳು, ವಾಕ್ ಸ್ವಾತಂತ್ರ್ಯದ ಬಗ್ಗೆ ಪ್ರಶ್ನೆ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಆಗ ಅರ್ಜಿದಾರರ ಪರ ವಕೀಲರು ದಸರಾ ಹಿಂದೂ ಧರ್ಮದ ಆಚರಣೆ. ಉದ್ಘಾಟನೆಗೆ ಬಂದವರು ಹೂವಿನ ಅಭಿಷೇಕ ಮಾಡಬೇಕು. ದಸರಾ ಉದ್ಘಾಟನೆಯಲ್ಲಿ ಸಾಕಷ್ಟು ಧಾರ್ಮಿಕ ಕೆಲಸ ಇವೆ ಎಂದರು. ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿಗಳು ನಿಮ್ಮ ಅಭಿಪ್ರಾಯವನ್ನು ಕೂಡಾ ಸೂಕ್ತ ವೇದಿಕೆಯಲ್ಲಿ ಹೇಳಬಹುದು. ಆದರೆ ಸಂವಿಧಾನ ನೀಡಿರುವ ಯಾವ ಹಕ್ಕು ಉಲ್ಲಂಘನೆಯಾಗಿದೆ ಹೇಳಿ? ಸಂವಿಧಾನದ 26ನೇ ಹಕ್ಕು ಇಲ್ಲಿ ಹೇಗೆ ಉಲ್ಲಂಘನೆಯಾಗಲಿದೆ ಎಂದು ಪ್ರಶ್ನಿಸಿದರು.
ಬಾನು ಮುಷ್ತಾಕ್ ಧರ್ಮದಲ್ಲಿ ವಿಗ್ರಹ ಪೂಜೆ ಅನ್ನೋದು ಇಲ್ಲ. ಹಿಂದೂ ಧರ್ಮದಲ್ಲಿ ವಿಗ್ರಹ ಪೂಜೆಗೆ ಹೆಚ್ಚಿನ ಮಹತ್ವ ಇದೆ. ಹಿಂದೂ ವಿರೋಧಿ ಹೇಳಿಕೆ ನೀಡಿದವರು ಹೇಗೆ ಉದ್ಘಾಟನೆ ಮಾಡ್ತಾರೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಇದಕ್ಕೆ ಪೀಠ ಆ ಪ್ರಶ್ನೆ ಇಲ್ಲಿ ಇಲ್ಲ. ನಂಬಿಕೆ ಇಲ್ಲದವರು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಬಾರದು ಎಂದು ದೇವಸ್ಥಾನ ಅಅಥವಾ ಟ್ರಸ್ಟಿ ಯಾರೂ ನಮ್ಮ ಮುಂದೆ ಇಲ್ಲ ಎಂದರು.
ಸರ್ಕಾರದ ಪರ ವಾದ ಮಂಡಿಸಿದ ಎಜಿ ಶಶಿಕಿರಣ್ ಶೆಟ್ಟಿ, ಲೇಖಕಿಯನ್ನು ಹಿಂದೂ ವಿರೋಧಿ ಎನ್ನುವುದು ಸರಿಯಲ್ಲ. ಚಾಮುಂಡಿ ಬೆಟ್ಟಕ್ಕೆ ಹೋಗಬೇಕೆಂದು ಅವರಿಗೂ ಆಸೆ ಇತ್ತೆಂದು ಹೇಳಿದ್ದಾರೆ. ಧರ್ಮದ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ನೀಡಬಾರದು. ದಸರಾ ಉದ್ಘಾಟಿಸಿದ ನಿಸಾರ್ ಅಹಮದ್ ಜೊತೆಗೆ ಪ್ರತಾಪ್ ಸಿಂಹ ಇದ್ದರು. ಆಗ ವಿರೋಧಿಸದೇ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ವಿರೋಧಿಸುತ್ತಿದ್ದಾರೆ. ಅರ್ಜಿದಾರರಿಗೆ ದಂಡ ವಿಧಿಸಬೇಕೆಂದು ವಾದ ಮಂಡಿಸಿದರು. ವಾದ ಪ್ರತಿವಾದಗಳನ್ನು ಆಲಿಸಿದ ಪೀಠ ಅರ್ಜಿಗಳನ್ನು ವಜಾಗೊಳಿಸಿದೆ. ಇದನ್ನೂ ಓದಿ: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ಗೆ ಆಹ್ವಾನ ವಿಚಾರ – ಇಂದು ಹೈಕೋರ್ಟ್‌ನಲ್ಲಿ ಮೂರು ಅರ್ಜಿಗಳ ವಿಚಾರಣೆ