ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ: ವಾದ, ಪ್ರತಿವಾದ ಹೀಗಿತ್ತು

Public TV
3 Min Read

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹೈಕೋರ್ಟ್ ಗೆ ಸಲ್ಲಿಸಿರುವ ಜಾಮೀನು ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.

ಜಾಮೀನು ಅರ್ಜಿಯ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ಅವರು ನಲಪಾಡ್ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು. ಈ ವೇಳೆ ನ್ಯಾಯಮೂರ್ತಿಗಳ ಮುಂದೇ ವಿಶೇಷ ಅಂಶವನ್ನು ಪ್ರಸ್ತಾಪಿಸಿದ ಅವರು, ಜೀವ ಭಯವಿರುವುದು ಹಲ್ಲೆಗೊಳಗಾದ ವಿದ್ವತ್ ಅವರಿಗೆ ಅಲ್ಲ. ಬದಲಾಗಿ ವಿದ್ವತ್‍ಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಎಂದು ವಾದ ಮಾಡಿದರು.

ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು, ಪ್ರಕರಣದಲ್ಲಿ ಉದ್ದೇಶ ಪೂರ್ವಕವಾಗಿ ನನ್ನ ನಲಪಾಡ್ ನನ್ನು ಸಿಕ್ಕಿಹಾಕಿಸುವ ಪ್ರಯತ್ನ ನಡೆದಿದೆ ಎಂದು ವಾದಿಸಿದರು. ಎರಡು ಕಡೆ ವಾದ ಆಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನ ಸೋಮವಾರಕ್ಕೆ ಮುಂದೂಡಿತು.

ನಲಪಾಡ್ ಪರ ವಕೀಲ ಸಿ.ವಿ.ನಾಗೇಶ್ ವಾದ ಹೀಗಿತ್ತು:
ವಿದ್ವತ್ ಆಸ್ಪತ್ರೆಯಲ್ಲಿದ್ದಾಗ ಪ್ರಜ್ಞೆ ತಪ್ಪಿರಲಿಲ್ಲ. ಐಸಿಯು ನಲ್ಲಿ ಚಿಕಿತ್ಸೆ ನೀಡುವ ವೇಳೆಯೂ ಆತ ಚೆನ್ನಾಗಿಯೇ ಮಾತನಾಡುತ್ತಿದ್ದ. ತನಿಖಾಧಿಕಾರಿಗಳಿಗೆ ವಿದ್ವತ್ ಪ್ರಜ್ಞೆ ತಪ್ಪಿದ್ದಾನೆ ಎನ್ನುವ ಸುಳ್ಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಬಾಟಲ್ ನಿಂದ ಹೊಡೆದಿದ್ದಾರೆ ಹೇಳಿದ್ದಾರೆ. ಆದರೆ ಇಲ್ಲಿ ಬಾಟಲ್ ಮಾರಕಾಸ್ತ್ರ ಅಲ್ಲ. ವಿದ್ವತ್ ಚೆನ್ನಾಗಿಯೇ ಇದ್ದರೂ, ತೀವ್ರವಾಗಿ ಹಲ್ಲೆಯಾಗಿದೆ ಎಂದು ಬಿಂಬಿಸಿಕೊಂಡಿದ್ದಾನೆ. ವಿದ್ವತ್ ಡಿಸ್ಚಾರ್ಜ್ ವರದಿಯಲ್ಲಿ ಯಾವುದೇ ರೊಟೀನ್ ಚಿಕಿತ್ಸೆ ನೀಡಿರುವ ಬಗ್ಗೆ ಉಲ್ಲೇಖಿಸಿಲ್ಲ. ಆತನನ್ನು ಸುಮ್ಮನೆ ಆಸ್ಪತ್ರೆಯಲ್ಲಿ ಇಟ್ಟುಕೊಂಡಿದ್ದರು. ವೈದ್ಯರು ಮನೆಗೆ ಹೋಗುವಂತೆ ಸೂಚನೆ ನೀಡಿದ್ದರೂ ವಿದ್ವತ್ ಮನೆಗೆ ಹೋಗಿಲ್ಲ. ಪದೆ ಪದೆ ತಲೆನೋವು, ಎದೆನೋವು ಎಂದು ನಾಟಕ ಮಾಡಿದ್ದಾರೆ. ನಲಪಾಡ್ ತಾನಾಗಿಯೇ ಬಂದು ಕಾನೂನಿಗೆ ತಲೆಬಾಗಿದ್ದಾನೆ. ಬೆದರಿಕೆ ಹಾಕುವ ಉದ್ದೇಶ ಇದ್ದಿದ್ದಾರೆ ನಲಪಾಡ್ ಶರಣಾಗತನಾಗುತ್ತಿರಲಿಲ್ಲ.

ವಿಶೇಷ ಅಭಿಯೋಜಕ ಶ್ಯಾಮ್ ಸುಂದರ್ ವಾದ ಹೀಗಿತ್ತು:
ವೈದ್ಯಕೀಯ ದಾಖಲೆಗಳು ನಲಪಾಡ್ ಪರ ವಕೀಲರಿಗೆ ಸಿಕ್ಕಿದ್ದು ಹೇಗೆ? ಇದರಲ್ಲೆ ನಲಪಾಡ್ ಎಷ್ಟು ಪ್ರಭಾವಿ ಆಗಿದ್ದಾನೆ ಎನ್ನುವುದು ತಿಳಿಯುತ್ತದೆ. ವೈದ್ಯರು ನಮಗೆ ಸಹಕಾರ ನೀಡಿಲ್ಲ ಬದಲಾಗಿ ನಲಪಾಡ್ ಪರ ವಕೀಲರಿಗೆ ಸಹಕಾರ ನೀಡಿದ್ದಾರೆ. ವೈದ್ಯಕೀಯ ದಾಖಲೆ ಅರೋಪಿ ಪರ ವಕೀಲರಿಗೆ ಸಿಕ್ಕ ಬಗ್ಗೆ ತನಿಖೆ ಆಗಬೇಕು. ಮಲ್ಯ ಆಸ್ಪತ್ರೆಯ ವೈದ್ಯ ಆನಂದ್ ಮೇಲೆ ಸಾಕಷ್ಟು ಅನುಮಾನ ಇದೆ. ಇದೆ ಅನಂದ್ ಮೊದಲು ಸರ್ಜರಿ ಮಾಡಬೇಕು ಎಂದು ಹೇಳಿದರು. ಈಗ ಸರ್ಜರಿ ಅವಶ್ಯಕತೆ ಇಲ್ಲ ಎಂದು ವರದಿ ನೀಡಿದ್ದಾರೆ. ಇದು ಹೇಗೆ ಸಾಧ್ಯ. ಘಟನೆ ನಡೆದ ದಿನ ಕೊಟ್ಟ ಮೆಡಿಕಲ್ ರಿಪೋರ್ಟ್‍ನಲ್ಲಿ ಎಂಟು ಕಡೆ ಮೂಳೆ ಮುರಿದಿರುವುದಾಗಿ ಹೇಳಿದ್ದರು. ಆದರೆ ಇದೀಗ ಇದಕ್ಕೆ ವಿರುದ್ಧವಾಗಿ ವರದಿ ನೀಡಿದ್ದಾರೆ. ಇಲ್ಲಿ ವಿದ್ವತ್‍ಗೆ ಜೀವ ಬೆದರಿಕೆ ಬದಲು ವೈದ್ಯ ಆನಂದ್‍ಗೆ ಜೀವ ಬೆದರಿಕೆ ಇದೆ. ಹಾಗಾಗಿ ವೈದ್ಯ ಆನಂದ್ ಅವರು ವೈದ್ಯಕೀಯ ರಿಪೋರ್ಟ್ ತಿರುಚಿ ನೀಡಿದ್ದಾರೆ.

ಘಟನೆ ನಡೆದು ಮಾರನೇ ದಿನವೇ ವಿದ್ವತ್ ವಿರುದ್ಧ ಕೌಂಟರ್ ಕೇಸ್ ದಾಖಲಾಗಿದೆ. ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುವವನ ವಿರುದ್ಧವೇ ಎಫ್‍ಐಆರ್ ದಾಖಲಿಸಲಾಗಿದೆ. ಈ ಬೆಳವಣಿಗೆ ಗಮನಿಸಿದರೆ ಸಮಾಜ ಎತ್ತ ಕಡೆ ಸಾಗುತ್ತಿದೆ ಎಂಬುದು ಗೊತ್ತಾಗಲಿದೆ. ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‍ಗೆ ಸಿಡಿ ನೀಡುತ್ತೇವೆ. ಅದನ್ನು ಒಮ್ಮೆ ನೋಡಿದರೆ ನಲಪಾಡ್ ಎಷ್ಟು ಕ್ರೂರ ಎಂಬುವುದು ತಿಳೀಯುತ್ತದೆ ಎಂದು ತಮ್ಮ ವಾದ ಮಂಡಿಸಿದರು.

ಎರಡು ಕಡೆಯ ವಾದ ಪ್ರತಿವಾದ ಕೇಳಿದ ನ್ಯಾಯಾಮೂರ್ತಿಗಳು ಕೋರ್ಟ್‍ನ ಸಮಯ ಮುಗಿದಿದ್ದರಿಂದ ಪ್ರಕರಣವನ್ನ ಸೋಮವಾರಕ್ಕೆ ಮುಂದೂಡಿದರು. ಸೋಮವಾರ ವಿಶೇಷ ಅಭಿಯೋಜಕರು ಹಲ್ಲೆಯ ಸಿಸಿಟಿವಿ ದೃಶ್ಯಗಳನ್ನು ಕೋರ್ಟ್ ಗೆ ನೀಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *