ಉಪವಾಸ ಸತ್ಯಾಗ್ರಹ ಆರಂಭಿಸಿದ ಹೈಕೋರ್ಟ್ ಹಿರಿಯ ವಕೀಲರು

Public TV
2 Min Read

ಬೆಂಗಳೂರು: ಹೈಕೋರ್ಟ್ ನ್ಯಾಯಾಧೀಶರ ಶೀಘ್ರ ನೇಮಕಾತಿಗೆ ಆಗ್ರಹಿಸಿ ಹಿರಿಯ ವಕೀಲರು ಹೈಕೋರ್ಟ್ ಬಳಿಯ ಗೋಲ್ಡನ್ ಜ್ಯೂಬ್ಲಿ ಗೇಟ್ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಮಾಜಿ ಅಡ್ವೊಕೇಟ್ ಜನರಲ್ ಬಿವಿ ಆಚಾರ್ಯ ಜೊತೆ ಹಿರಿಯ ವಕೀಲರಾದ ಸಜ್ಜನ್ ಪೂವಯ್ಯ, ನಂಜುಂಡ ರೆಡ್ಡಿ, ಬಿಎಲ್ ಜಗದೀಶ್ ಸೇರಿದಂತೆ ಹಲವು ಮಂದಿ ಭಾಗವಹಿಸಿ ಪ್ರತಿಭಟಿಸಿದ್ದರು.

ಕೇಂದ್ರ ಸರ್ಕಾರ ಹೈಕೋರ್ಟ್‍ಗೆ ನ್ಯಾಯಮೂರ್ತಿಗಳ ಭರ್ತಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಇದರಿಂದ ಕರ್ನಾಟಕದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡಲು ಮೀನಮೇಷ ಎಣಿಸುತ್ತಿದೆ ಎಂದು ಹಿರಿಯ ವಕೀಲರು ಆರೋಪ ಮಾಡಿದರು. ಧರಣಿ ನಿರತ ಸ್ಥಳಕ್ಕೆ ಮಾಜಿ ಕಾನೂನು ಸಚಿವ, ಹಾಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದಗೌಡ, ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸೋ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಸತ್ಯಾಗ್ರಹಕ್ಕೆ ಸ್ಟೇಜ್ ಹಾಕಿರುವ ಅಡ್ವೋಕೇಟ್ಸ್ ಅಸೋಸಿಯೇಷನ್ ಆಫ್ ಬೆಂಗಳೂರು(ಎಎಬಿ) ಬೆಳಗ್ಗೆ 10:30 ರಿಂದ 5:30 ರ ವರೆಗೆ ಒಂದು ವಾರದ ಕಾಲ ಧರಣಿ ಮಾಡಲಿದ್ದು, ಪ್ರತಿಭಟನೆಗೆ ಸರ್ಕಾರ ಮಣಿಯದೆ ಹೋದರೆ ಇಡೀ ರಾಜ್ಯಾದ್ಯಂತ ಕೋರ್ಟ್ ಕಲಾಪ ಬಹಿಷ್ಕಾರ ಮಾಡುವುದಾಗಿ ಹಿರಿಯ ವಕೀಲರು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆ ಏನು? ಹೈಕೋರ್ಟ್ ನ್ಯಾಯಾಧೀಶ ಹುದ್ದೆ ಖಾಲಿ ಇರುವುದರಿಂದ ಸುಮಾರು 3 ಲಕ್ಷ ಪ್ರಕರಣಗಳು ವಿಲೇವಾರಿಯಾಗದೇ ಉಳಿದಿದ್ದು, ವಕೀಲರಿಗೆ ಹಾಗೂ ಕಕ್ಷಿದಾರರಿಗೆ ನ್ಯಾಯದಾನ ವಿಳಂಬವಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರು ವಕೀಲರ ಸಂಘವು ರಾಷ್ಟ್ರಪತಿ, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಕೇಂದ್ರ ಕಾನೂನು ಮಂತ್ರಿ ಮತ್ತು ಅಟಾರ್ನಿ ಜನರಲ್ ಅವರಿಗೆ ಕರ್ನಾಟಕ ಹೈಕೋರ್ಟ್ ಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡಲು ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ.

ಸುಪ್ರೀಂ ಕೋರ್ಟ್ ಕರ್ನಾಟಕದ ಹೈಕೋರ್ಟ್ ಗೆ 62 ನ್ಯಾಯಮೂರ್ತಿಗಳನ್ನು ಅನುಮೋದಿಸಿದೆ. ಪ್ರಸ್ತುತ 24 ನ್ಯಾಯಮೂರ್ತಿಗಳೂ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ 8 ನ್ಯಾಯಮೂರ್ತಿಗಳು ಧಾರವಾಡ ಮತ್ತು ಕಲಬುರುಗಿ ಸಂಚಾರಿ ಪೀಠದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪ್ರಿನ್ಸಿಪಲ್ ಬೆಂಚ್‍ನಲ್ಲಿ 16 ನ್ಯಾಯಮೂರ್ತಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ 38 ನ್ಯಾಯಮೂರ್ತಿಗಳ ಹುದ್ದೆ ಖಾಲಿ ಇದೆ.

ನೆರೆಯ ರಾಜ್ಯದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಗೆ ಹೋಲಿಸಿದರೆ ರಾಜ್ಯದ ಹೈಕೋರ್ಟ್ ನಲ್ಲಿ ಸುಮಾರು ಶೇ.60 ರಷ್ಟು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಪ್ರಕರಣಗಳು ನಿಗದಿತ ಸಮಯಕ್ಕೆ ನ್ಯಾಯಾಲಯದಲ್ಲಿ ವಿಚಾರಣೆಗೆ ಬರದೆ ಕಕ್ಷಿದಾರರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ಅವರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿದೆ.

ಕಣ್ಣೀರಿಟ್ಟಿದ್ದ ಸಿಜೆ: 2016ರ ನರೇಂದ್ರ ಮೋದಿ ಅವರ ಸ್ವಾತಂತ್ರ್ಯ ಭಾಷಣದಲ್ಲಿ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರವನ್ನು ಪ್ರಸ್ತಾಪ ಮಾಡದಕ್ಕೆ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಟಿ.ಎಸ್.ಠಾಕೂರ್ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ನ್ಯಾಯಾಲಯಗಳಿಗೆ ನ್ಯಾಯಮೂರ್ತಿಗಳನ್ನು ನೇಮಿಸುವಲ್ಲಿ ಕೇಂದ್ರ ಸರ್ಕಾರದ ವಿಳಂಬ ನೀತಿಯಿಂದ ಬೇಸರಗೊಂಡು ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೆದುರೇ ಟಿ.ಎಸ್.ಠಾಕೂರ್ ಗದ್ಗದಿತರಾಗಿ ಕಣ್ಣೀರಿಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *