ಬಳ್ಳಾರಿ: ಕುರುಬ ಸಮುದಾಯವನ್ನು (Kuruba Community) ಎಸ್‌ಟಿ ಪಟ್ಟಿಗೆ (ST List) ಸೇರ್ಪಡೆ ಮಾಡಲು ಮುಂದಾಗುತ್ತಿರುವ ಸಿಎಂ ಸಿದ್ದರಾಮಯ್ಯನವರ (Siddaramaiah) ವಿರುದ್ಧ ಅಖಂಡ ಕರ್ನಾಟಕ ವಾಲ್ಮೀಕಿ ನಾಯಕ ಒಕ್ಕೂಟ ಅಕ್ರೋಶ ಹೊರಹಾಕಿದೆ.
ಅಖಂಡ ಕರ್ನಾಟಕ ವಾಲ್ಮೀಕಿ ನಾಯಕರ ಒಕ್ಕೂಟ ಇಂದು ಸಭೆ ನಡೆಸಿ ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿತು.
ಸುದ್ದಿಗೋಷ್ಠಿ ನಡೆಸಿ ಅಧ್ಯಕ್ಷ ತಿಮ್ಮಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜ್ಯದಲ್ಲಿ ಎಸ್‌ಟಿ ನಾಯಕರನ್ನು ತುಳಿಯುವ ಕಾರ್ಯ ಮಾಡುತ್ತಿದ್ದಾರೆ. ರಾಜಣ್ಣ, ನಾಗೇಂದ್ರ ಅವರನ್ನು ಸಿದ್ದರಾಮಯ್ಯ ಬಲಿಪಶು ಮಾಡಿದ್ದಾರೆ ಎಂದು ಸಿಟ್ಟು ಹೊರಹಾಕಿದರು.
ನಮ್ಮ ಎಸ್‌ಟಿ ಶಾಸಕರು ಸಚಿವರು ಸಿದ್ದರಾಮಯ್ಯನವರಿಗೆ ಹೆದರಿ ಅವರ ವಿರುದ್ದ ಮಾತನಾಡುತ್ತಿಲ್ಲ. ನಾಗೇಂದ್ರಗೆ ಸಚಿವ ಸ್ಥಾನ ಹಾಗೂ ಸತೀಶ್ ಜಾರಕಿಹೊಳಿ ಅವರಿಗೆ ಡಿಕೆ ಶಿವಕುಮಾರ್ ಬದಲು ನಿನ್ನನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಸುಳ್ಳು ಭರವಸೆ ಕೊಟ್ಟಿದ್ದಾರೆ ಎಂದು ದೂರಿದರು. ಇದನ್ನೂ ಓದಿ: KSRTC ಬಸ್‌ಗಳಿಂದ ಟ್ರಾಫಿಕ್ ನಿಯಮ ಉಲ್ಲಂಘನೆ; 2.69 ಲಕ್ಷ ಕೇಸ್, 13 ಕೋಟಿ ದಂಡ – ಫೈನ್ ಮನ್ನಾಗೆ ಸಾರಿಗೆ ಸಚಿವರ ಪತ್ರ
ಬುಡಕಟ್ಟು ಸಮಾಜದವರು ಎಸ್‌ಟಿಗೆ ಸೇರಲು ನಮ್ಮ ವಿರೋಧ ಇಲ್ಲ. ಆದರೆ ಸಿದ್ದರಾಮಯ್ಯ ವಾಲ್ಮೀಕಿ ಸಮಾಜವನ್ನು ತುಳಿಯುತ್ತಿದ್ದಾರೆ. ವಾಲ್ಮೀಕಿ ಸಮಾಜ ನಶಿಸಿ ಹೋಗಬೇಕು, ಇವರನ್ನ ಜೀವಂತವಾಗಿ ತುಳಿಯಬೇಕು ಎಂಬ ಕಾರಣಕ್ಕೆ ಕುರುಬ ಸಮಾಜವನ್ನು ಎಸ್‌ಟಿಗೆ ಸೇರಿಸಲು ಹುನ್ನಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಸಿದ್ದರಾಮಯ್ಯನವರೇ ಶೇ.50 ಮೀಸಲಾತಿ ನಮಗೆ ಕೊಟ್ಟು ಎಲ್ಲಾ ಸಮಾಜವನ್ನೂ ಸೇರಿಸಿಬಿಡಿ. ಬಳಿಕ ಒಳ ಮೀಸಲಾತಿ ವಾಲ್ಮಿಕಿಗೆ ಕೊಡಿ ಆಗ ನಮ್ಮವಿರೋಧ ಇರಲ್ಲ. ಕುರುಬ ಸಮಾಜದವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಮುಂದುವರೆದಿದ್ದಾರೆ. ಕೆಲ ವರ್ಷಗಳಿಂದ ನಮ್ಮ ಸಮಾಜ ಮುಂದೆ ಬರುತ್ತಿದೆ ಅಷ್ಟೇ. ಆದರೆ ಇದನ್ನು ಸಹಿಸದ ಸಿದ್ದರಾಮಯ್ಯ ನಮ್ಮ ಸಮಾಜವನ್ನು ತುಳಿಯಲು ಮುಂದಾಗುತ್ತಿದ್ದಾರೆ. ವಾಲ್ಮೀಕಿ ಸಮುದಾಯದ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು ಸೇರಿ ಎಲ್ಲರೂ ಸರ್ಕಾರದ ಈ ನಿರ್ಧಾರವನ್ನು ವಿರೋಧ ಮಾಡಬೇಕು ಎಂದು ತಿಮ್ಮಪ್ಪ ಒತ್ತಾಯಿಸಿದರು.