ಮುನಿಯಪ್ಪ ಅಳಿಯನಿಗೆ ವಿಧಾನಸಭೆ ಕಾರ್ಯದರ್ಶಿ-2 ಹುದ್ದೆ ಸೃಷ್ಟಿಗೆ ಮುಂದಾದ ಸರ್ಕಾರ: ಸಚಿವಾಲಯದ ಅಧಿಕಾರಿ ವರ್ಗ ವಿರೋಧ

Public TV
1 Min Read

ಬೆಂಗಳೂರು: ಮಂತ್ರಿ ಅಳಿಯನಿಗೆ ಹುದ್ದೆ ಸೃಷ್ಟಿ ಮಾಡಲು ಸರ್ಕಾರ ಮುಂದಾಗಿದ್ದು, ಸರ್ಕಾರದ ತೀರ್ಮಾನದ ವಿರುದ್ಧ ವಿಧಾನಸಭಾ ಸಚಿವಾಲಯದ ಅಧಿಕಾರಿ ವರ್ಗ, ಸಿಬ್ಬಂದಿ ಹೋರಾಟಕ್ಕಿಳಿದಿದ್ದಾರೆ.

ಸರ್ಕಾರದ ಮೇಲೆ ಒತ್ತಡ ಹೇರಿ ಅಳಿಯನಿಗೆ ಕಾಯದರ್ಶಿ-2 ಹುದ್ದೆ ಸೃಷ್ಟಿ ಯತ್ನ ಆರೋಪ ಕೇಳಿಬಂದಿದೆ. ಸಚಿವ ಮುನಿಯಪ್ಪ ಅಳಿಯ ಕೆ.ಸಿ.ಶಶಿಧರ್ ಹಾಲಿ ವಿಧಾನಸಭಾ ಸಚಿವಾಲಯದಲ್ಲಿ ಗಣಕ ವಿಭಾಗದ ನಿರ್ದೇಶಕರಾಗಿದ್ದು, ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ-2 ಹುದ್ದೆಗೆ ನಿಯೋಜನೆ ಮಾಡಲು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ – ಕ್ಯಾಬಿನೆಟ್‌ನಲ್ಲಿ ಇಂದು ಮತ್ತೆ ಚರ್ಚೆ?

ಶಶಿಧರ್ ಮನವಿಗೆ ಮಾವ ಆಗಿರುವ ಸಚಿವ ಮುನಿಯಪ್ಪ ಅವರಿಂದಲೂ ಶಿಫಾರಸು ಮಾಡಿದ್ದಾರೆ ಎನ್ನಲಾಗಿದೆ. ಶಶಿಧರ್ ಪರವಾಗಿ ಪತ್ನಿಯಾಗಿರುವ ಶಾಸಕಿ ರೂಪಾಕಲಾ ಅವರಿಂದಲೂ ಲಾಭಿ ಆರೋಪ ಕೇಳಿಬಂದಿದ್ದು, ನಿರ್ದೇಶಕ ಹುದ್ದೆಯಿಂದ ಕಾರ್ಯದರ್ಶಿ-2 ಹುದ್ದೆಗೆ ಮೇಲ್ದರ್ಜೆಗೆ ಏರಿಸಲು ಕಡತ ಸಿದ್ಧಗೊಳಿಸಿದ್ದಾರೆ ಎನ್ನಲಾಗಿದೆ.

ಡಿಪಿಎಆರ್ ಸಿದ್ಧಗೊಳಿಸಿರುವ ಕಡತಕ್ಕೆ ವಿಧಾನಸಭಾ ಸಚಿವಾಲಯದಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಸಚಿವಾಲಯದ ನಿರ್ಧಾರದಿಂದ ಕಂಗೆಟ್ಟ ವಿಧಾನಸಭೆಯ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರಗೆ ಮತ್ತೆ ಜೈಲೇ ಗತಿ – ಆ.3 ರವರೆಗೆ ನ್ಯಾಯಾಂಗ ಬಂಧನ

ಗಣಕ ವಿಭಾಗದ ಅಧಿಕಾರಿಯನ್ನು ಸಚಿವಾಲಯದಲ್ಲಿ ಪರಿಗಣಿಸಬಾರದು. ಸಚಿವಾಲಯದ ವಿಭಾಗದ ವೃಂದಗಳಲ್ಲೇ ಹುದ್ದೆ ಸೃಷ್ಟಿಸಿ ನೀಡಬೇಕು ಅಂತಾ ಒತ್ತಾಯಿಸಿದ್ದಾರೆ. ಸಚಿವನ ಅಳಿಯನಿಗಾಗಿ ಹುದ್ದೆ ಸೃಷ್ಟಿ ಮಾಡುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಬಳಿ ಕಡತ ಇದೆ. ಅವರು ಸಹಿ ಹಾಕ್ತಾರಾ? ಕಾದುನೋಡಬೇಕಿದೆ.

Share This Article