ಬೆಂಗಳೂರು: ಸಚಿವನಾಗಿ ಒಂದು ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಕೆಲಸ ಮಾಡಿರುವ ಸಂಪೂರ್ಣ ತೃಪ್ತಿ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿ ಒಂದು ವರ್ಷ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಇಂದಿಗೆ ಸಚಿವನಾಗಿ ಒಂದು ವರ್ಷ ಆಗಿದೆ. ನನ್ನ ಕೆಲಸ ನನಗೆ ತೃಪ್ತಿ ತಂದಿದೆ. ಪ್ರಾಮಾಣಿಕವಾಗಿ ನಾನು ಕೆಲಸ ಮಾಡಿದ್ದೇನೆ ಎಂದರು.
ಪುನೀತ್ ರಾಜ್ ಕುಮಾರ್ ನಿಧನರಾದಾಗ ಅತ್ಯಂತ ಯಶಸ್ವಿಯಾಗಿ ಅಂತ್ಯ ಸಂಸ್ಕಾರ ಕಾರ್ಯ ಮಾಡಿದ್ದೇವೆ. ಒಂದು ವರ್ಷ ಅನೇಕ ಚಾಲೆಂಜಿಂಗ್ ಆಗಿ ಇತ್ತು. ಹಿಜಬ್ ಪ್ರಕರಣ ನನಗೆ ಹೆಚ್ಚು ಚಾಲೆಂಜ್ ಆಗಿತ್ತು. ಇದಕ್ಕಾಗಿ ಹಗಲು ರಾತ್ರಿ ಈ ಬಗ್ಗೆ ಕೆಲಸ ಮಾಡಿದ್ದೇವೆ. ಸಿಎಂ ಸೇರಿದಂತೆ ಎಲ್ಲರ ಸಹಕಾರದಿಂದ ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ತಿಳಿಸಿದರು.
ಒಂದು ವರ್ಷ ಸಿಹಿಯೂ ಇದೆ- ಕಹಿಯು ಇದೆ. ಕೊಲೆ ರಕ್ತಪಾತ ಆದಾಗ ಸ್ವಲ್ಪ ನೋವಾಗಿದೆ. ಆದ್ರೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇವೆ. ಎಲ್ಲಾ ಸಮಸ್ಯೆಗಳು ಈ ವರ್ಷವೇ ಬಂದ ಹಾಗೆ ಬಂದಿವೆ. ಎಲ್ಲವನ್ನು ನಿಭಾಯಿಸಿದ್ದೇವೆ. ಯಾವುದನ್ನು ರಸ್ತೆ ಮೇಲೆ ಬಿಟ್ಟಿಲ್ಲ ಎಂದು ತಿಳಿಸಿದರು.
ಏನೇ ಆದರು ಹೆಚ್ಚು ರಾಜೀನಾಮೆ ಕೇಳಿದ್ದು ಗೃಹ ಸಚಿವರದ್ದು. ಏನೇ ತಪ್ಪು ಆದರು ನಮ್ಮ ರಾಜೀನಾಮೆ ಕೇಳಿದ್ದಾರೆ. ಅದು ಸಹಜ. ಅಧಿಕಾರಗಳ ವಿಶ್ವಾಸ ತೆಗೆದುಕೊಂಡು ಕೆಲಸ ಮಾಡಿದ್ದೇನೆ. ಪುನೀತ್ ಅಂತ್ಯ ಸಂಸ್ಕಾರದಲ್ಲಿ ನಾನು ಸಿಎಂ ಇಬ್ಬರು ಎಲ್ಲೇ ಇದ್ದು ಕೆಲಸ ಮಾಡಿದ್ದೇವೆ. ಮತಾಂತರ ನಿಷೇಧ ಕಾಯ್ದೆ, ಆನ್ ಲೈನ್ ಗೇಮ್ ನಿಷೇಧ ಕಾಯ್ದೆ ಜಾರಿ ತಂದಿದ್ದೇವೆ. ಜೈಲು ಅಂದರೆ ಸೆರೆಮನೆ ಆಗಿರದೇ ಕೆಲವರಿಗೆ ಅರಮನೆ ಆಗಿತ್ತು. ಇದಕ್ಕಾಗಿ ಒಂದು ಬಿಲ್ ತಂದು ಕ್ರಮ ತೆಗೆದುಕೊಂಡಿದ್ದೇವೆ. ಅಕ್ರಮ ಮಾಡುವವರಿಗೆ ಬಿಗಿಯಾದ ಕಾಯ್ದೆ ಜಾರಿ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ
ಇಲಾಖೆಯಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸ ಆಗಬೇಕು. ಇಲಾಖೆ ಜನಸ್ನೇಹಿಯಾಗಬೇಕು. ಟಲಿಜೆನ್ಸ್ ಗೆ ವಿಶೇಷ ನೇಮಕಾತಿ ಮಾಡಿಕೊಳ್ತಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಎಲ್) ವಿಶ್ವವಿದ್ಯಾಲಯ ಮಾಡಬೇಕು ಅಂತ ಇದೆ. ಕೇಂದ್ರ ಗೃಹ ಇಲಾಖೆ ಲ್ಯಾಬ್ ಸ್ಥಾಪನೆಗೆ ಒಪ್ಪಿಗೆ ನೀಡಿದೆ. ಅಪರಾಧ ಪ್ರಕರಣದಲ್ಲಿ ಶಿಕ್ಷೆ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಆಗಬೇಕು. ಮಾದಕ ವಸ್ತುಗಳಿಗೆ ನಿಯಂತ್ರಣ ಮಾಡಲು ಮತ್ತಷ್ಟು ಕೆಲಸ ಆಗಬೇಕು. ಮಾದಕ ವಸ್ತುಗಳ ಪ್ರಕರಣದಲ್ಲಿ ಏನಾದರೂ ಪ್ರಬಲವಾಗಿ ಮಾಡಬೇಕು ಎಂಬ ಆಸೆ ಇದೆ ಅಂತ ತಿಳಿಸಿದರು.