ಬೆಂಗಳೂರಿನ 1200 ಚದರಡಿ ವ್ಯಾಪ್ತಿ ವಿಸ್ತೀರ್ಣದ ಕಟ್ಟಡಗಳಿಗೆ ಓಸಿ ವಿನಾಯಿತಿ: ಸರ್ಕಾರದಿಂದ ಆದೇಶ ಪ್ರಕಟ

Public TV
1 Min Read

ಬೆಂಗಳೂರು: ಗ್ರೇಟರ್‌ ಬೆಂಗಳೂರು ಆಡಳಿತ (GBA) ವ್ಯಾಪ್ತಿಯಲ್ಲಿ 1200 ಚದರಡಿ(30*40 ಸೈಟ್‌) ವ್ಯಾಪ್ತಿಯ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ (Occupational Certificate) ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ (Karnataka Government) ಅಧಿಕೃತ ಆದೇಶ ಪ್ರಕಟಿಸಿದೆ.

ಅ.9 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ಅನ್ವಯ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ 1200 ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿರುವ ನೆಲ+2 ಅಂತಸ್ತು ಅಥವಾ ಸ್ಟಿಲ್ಟ್‌(ಬೇಸ್‌ಮೆಂಟ್‌ ಪಾರ್ಕಿಂಗ್‌)+3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಓಸಿ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಿದೆ.  ಇದನ್ನೂ ಓದಿ:  ನೀವು ಬೆಂಗಳೂರಿಗೆ ಹೋದರೆ, ಕನ್ನಡ ಕಲಿಯಿರಿ: ಝೋಹೊ ಸಂಸ್ಥಾಪಕ ಶ್ರೀಧರ್ ವೆಂಬು

 

ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಎಸ್ಕಾಂಗಳು ವಿದ್ಯುತ್‌ ಸಂಪರ್ಕ ಪಡೆಯಲು ಓಸಿ ಕಡ್ಡಾಯ ಮಾಡಿದ್ದವು. ಆದರೆ ನಕ್ಷೆ ಮಂಜೂರಾತಿ ಇಲ್ಲದೆ ಓಸಿ ನೀಡಲು ಅವಕಾಶವಿರಲಿಲ್ಲ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ 3.30 ಲಕ್ಷ ಕಟ್ಟಡಗಳು ನಿರ್ಮಾಣ ಪೂರ್ಣಗೊಂಡರೂ ಓಸಿ ಇಲ್ಲದೆ ವಿದ್ಯುತ್‌ ಸಂಪರ್ಕ ನೀಡಿರಲಿಲ್ಲ. ಇದನ್ನೂ ಓದಿ:  ಟ್ರಂಪ್‌ಗೆ ಗೂಗಲ್‌ ಟಕ್ಕರ್‌| ವಿಶಾಖಪಟ್ಟಣದಲ್ಲಿ ಎಐ-ಹಬ್‌ಗಾಗಿ 1500 ಕೋಟಿ ಡಾಲರ್‌ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಟಿ

ಈ ಹಿಂದೆಯೇ 1,200 ಚದರ ಅಡಿ ನಿವೇಶನಗಳಿಗೆ ರಾಜ್ಯ ಸರ್ಕಾರ ಓಸಿ ವಿನಾಯಿತಿ ನೀಡಿ ಆದೇಶ ಮಾಡಿತ್ತು. ಈಗ ಮತ್ತಷ್ಟು ಕಾನೂನು ಸಲಹೆ ಪಡೆದುಕೊಂಡು ಸಂಪೂರ್ಣ ಮಾಹಿತಿ ಆಧರಿಸಿ ಓಸಿ ವಿನಾಯಿತಿಗೆ ಸರ್ಕಾರ ಆದೇಶ ಮಾಡಿದೆ. ಮುಂದಿನ ಕ್ಯಾಬಿನೆಟ್ ನಲ್ಲಿ 2,400 ಚದರ ಅಡಿ ನಿವೇಶನಗಳಿಗೆ ವಿನಾಯಿತಿ ಸಿಗುವ ಸಾಧ್ಯತೆಯಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

Share This Article