ಜೈಲಿಂದ ಶಶಿಕಲಾ ಹೊರಬರದಂತೆ ರಾಜ್ಯ ಸರ್ಕಾರದ ಪ್ಲಾನ್

Public TV
1 Min Read

-ಸುಪ್ರೀಂ ತೀರ್ಪು ಪುನರ್ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಲು ನಿರ್ಧಾರ

ವಿಶೇಷ ವರದಿ
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರೋ ದಿವಂಗತ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಹೊರಬರದಂತೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ.

ಸುಪ್ರೀಂಕೋರ್ಟ್ ತೀರ್ಪಿನ ಲೋಪ ಬಳಸಿ ಶಶಿಕಲಾ ಬಚಾವಾಗುವ ಸಂಭವವಿದ್ದು, ಇದನ್ನು ತಪ್ಪಿಸಲು ಫೆ.14ರ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲಿಸಲು ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸರ್ಕಾರ ನೀಡಿರುವ ಆದೇಶ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಅರ್ಜಿ ಸಲ್ಲಿಕೆಗೆ ಸರ್ಕಾರ ಮುಂದಾಗಿರೋದ್ಯಾಕೆ?: ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ವೇಳೆಗೆ ಜಯಾ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ತೀರ್ಪಿನಲ್ಲಿ ಜಯಲಲಿತಾಗೆ ಅಪರಾಧಿಯಿಂದ ವಿನಾಯ್ತಿ ಸಿಕ್ಕಿತ್ತು. ಜಯಾ ಸಾವಿನ ಮುನ್ನವೇ ಕೋರ್ಟ್‍ನಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ತೀರ್ಪಷ್ಟೇ ಪ್ರಕಟಿಸಲು ಕಾಯ್ದಿರಿಸಿದ್ದಾಗ ಜಯಲಲಿತಾ ಮೃತಪಟ್ಟಿದ್ರು. ಜಯಲಲಿತಾ ಅಪರಾಧಿ ಆಗದೇ ಶಶಿಕಲಾಗೆ ಶಿಕ್ಷೆ ನೀಡಲು ಬರುವುದಿಲ್ಲ. ತೀರ್ಪಲ್ಲಿ ಮಾರ್ಪಾಡು ಆದೇಶ ಹೊರಬೀಳದಿದ್ದರೆ ಶಶಿಕಲಾಗೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅವಕಾಶವಿರುತ್ತದೆ. ಈ ಬಗ್ಗೆ ಹಿರಿಯ ವಕೀಲರಾದ ಬಿವಿ ಆಚಾರ್ಯ ರಾಜ್ಯದ ಗಮನ ಸೆಳೆದಿದ್ದರು. ಹೀಗಾಗಿ ಜಯಲಲಿತಾ ಅವರನ್ನೂ ಅಪರಾಧಿ ಎಂದು ಘೋಷಿಸಬೇಕು. ಜಯಾ ಅಪರಾಧಿ ಎಂದು ಆದೇಶದಲ್ಲಿ ಉಲ್ಲೇಖಿಸಬೇಕು ಎಂದು ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.

ರಾಜ್ಯದ ಪರ ವಾದ ಮಂಡಿಸುವವರ್ಯಾರು?: ಖ್ಯಾತ ನ್ಯಾಯವಾದಿ ಜೋಸೆಫ್ ಅರಿಸ್ಟಾಟಲ್ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲಿದ್ದಾರೆ. ವಿಶೇಷ ಪ್ರತಿನಿಧಿಯಾಗಿ ಹಿರಿಯ ನ್ಯಾಯವಾದಿ ಬಿ.ವಿ.ಆಚಾರ್ಯ ಅವರನ್ನ ರಾಜ್ಯ ಸರ್ಕಾರ ನೇಮಿಸಿದ್ದು, ಸರ್ಕಾರದ ಪರವಾಗಿ ಬಿವಿ ಆಚಾರ್ಯ ವಾದ ಮಂಡಿಸಲಿದ್ದಾರೆ. ಈ ಹಿಂದೆ ಕೆಳಹಂತದ ನ್ಯಾಯಾಲಯದಲ್ಲೂ ಬಿ.ವಿ.ಆಚಾರ್ಯ ವಾದ ಮಂಡಿಸಿದ್ದರು.

ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತು ಫೆಬ್ರವರಿ 14ರಂದು ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ ದೋಷಿ ಎಂದು ಪರಿಗಣಿಸಿ 4 ವರ್ಷ ಜೈಲು ಹಾಗೂ 10 ಕೋಟಿ ರೂ. ದಂಡ ವಿಧಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *