ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ಮೂಗುದಾರ

Public TV
2 Min Read

– ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆ ನಿಷೇಧ
– ಚಟುವಟಿಕೆಗೆ ಪೂರ್ವಾನುಮತಿ ಕಡ್ಡಾಯ

ಬೆಂಗಳೂರು: ಸರ್ಕಾರದ ಸ್ಥಳಗಳಲ್ಲಿ ಆರ್‌ಎಸ್‌ಎಸ್‌ (RSS) ಚಟುವಟಿಕೆಗಳಿಗೆ ಸಿದ್ದರಾಮಯ್ಯ (Siddaramaiah) ಸರ್ಕಾರ ಮೂಗುದಾರ ಹಾಕಿದೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಘ ಸಂಸ್ಥೆಗಳ ಚಟುವಟಿಕೆ ನಿಷೇಧಿಸಲು ಕ್ಯಾಬಿನೆಟ್‌ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

2013 ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ಸರ್ಕಾರ ತಮಿಳುನಾಡು ಸರ್ಕಾರ (Government of Tamil Nadu) ಕೈಗೊಂಡಿರುವ ನಿರ್ಧಾರದಂತೆ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನ ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ ನಿಯಮ ತರಲು ಮುಂದಾಗಿದೆ.

ತನ್ನ ತೀರ್ಮಾನದಲ್ಲಿ ಎಲ್ಲಿಯೂ ಆರ್‌ಎಸ್‌ಎಸ್‌ ಪದ ಬಳಕೆ ಮಾಡದ ಸರ್ಕಾರ ಖಾಸಗಿ ಸಂಸ್ಥೆಗಳು ಎಂದು ಉಲ್ಲೇಖಿಸಿ ಜಾಣ್ಮೆ ನಡೆ ಇರಿಸಿದೆ.

ಈ ನಿಯಮ ಜಾರಿಯಾದರೆ ಆರ್‌ಎಸ್‌ಎಸ್‌ ಮಾತ್ರವಲ್ಲ ಖಾಸಗಿ ಸಂಘ ಸಂಸ್ಥೆಗಳು / ಸಂಘಟನೆಗಳು ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಕಡಿವಾಣ ಬೀಳಲಿದೆ. ಯಾರೇ ಯಾವುದೇ ಕಾರ್ಯಕ್ರಮ ಮಾಡುವುದಾದರೂ ಅನುಮತಿ ಪಡೆಯಬೇಕಾಗುತ್ತದೆ.

ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆಗೆ ನಿಯಂತ್ರಣ ಮಾಡುವಂತೆ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದರು.

ಪ್ರಿಯಾಂಕ್‌ ಖರ್ಗೆ ಪತ್ರದಲ್ಲಿ ಏನಿತ್ತು?
ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಮಗ್ರತೆ, ಸಮಾನತೆ ಮತ್ತು ಏಕತೆಯ ಮೂಲಭೂತ ತತ್ವಗಳನ್ನೊಳಗೊಂಡ ಸಂವಿಧಾನವು ನಮಗೆ ಸರಕಾರವನ್ನು ನೀಡುತ್ತದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂಬ ಹೆಸರಿನ ಸಂಘಟನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಹಾಗೂ ಸಾರ್ವಜನಿಕ ಸರ್ಕಾರಿ ಮೈದಾನಗಳನ್ನು ಬಳಸಿಕೊಂಡು ಶಾಖೆ ನಡೆಸುತ್ತಾ, ಘೋಷಣೆಗಳನ್ನು ಕೂಗುತ್ತಾ ಮಕ್ಕಳು ಮತ್ತು ಯುವ ಸಮುದಾಯದ ಮನಸ್ಸಿನಲ್ಲಿ ಭಾರತದ ಏಕತೆಯ ವಿರುದ್ಧವಾಗಿ, ಹಾಗೂ ಸಂವಿಧಾನದ ಆಶಯಗಳ ವಿರುದ್ಧವಾಗಿ ನಕಾರಾತ್ಮಕ ಆಲೋಚನೆಗಳನ್ನು ತುಂಬಲಾಗುತ್ತಿದೆ.

ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ ಮುಗ್ಗ ಮಕ್ಕಳು ಹಾಡಿ ಯುವಜನರ ಮನಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರ್ಕಾರಿ ಶಾಲೆಗಳು ಹಾಗೂ ಸರ್ಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರ್ಕಾರಿ ಸ್ಥಳಗಳಲ್ಲಿ ಸಂಘಟನೆಯು ಶಾಖೆ, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

Share This Article