– ದ್ವೇಷ ಭಾಷಣ ಬಿಲ್ ಪೆಂಡಿಂಗ್
ಬೆಂಗಳೂರು: ರಾಜ್ಯ ಸರ್ಕಾರ ಕಳಿಸಿದ್ದ 22 ಮಸೂದೆಗಳ ಪೈಕಿ 19ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ದ್ವೇಷ ಭಾಷಣ ಮಸೂದೆಯನ್ನು ಪೆಂಡಿಂಗ್ ಇಟ್ಟಿದ್ದು, 2 ಮಸೂದೆಗಳ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೇಳಿದ್ದಾರೆ.
ಈ ಸಂಬಂಧ ಶುಕ್ರವಾರ (ಜ.9) ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳು ಮಾಧ್ಯಮ ಪ್ರಕಟಣೆ ಹೊರಡಿಸಿ, ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಣೆ ಕೇಳಿ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮಸೂದೆ ಹಾಗೂ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ವಿಧೇಯಕಗಳನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದಾರೆ. ಇದನ್ನೂ ಓದಿ: `ಮಾ ಇಂಟಿ ಬಂಗಾರಂ’.. ಸಮಂತಾ ರಗಡ್ ಅವತಾರ..!
ಇನ್ನೂ ದ್ವೇಷ ಭಾಷಣ ಮಸೂದೆಗೆ ಅಂಕಿತವೂ ಹಾಕದೇ ವಾಪಸ್ಸೂ ಕಳಿಸದೇ ಪೆಂಡಿಂಗ್ ಇಟ್ಟಿದ್ದಾರೆ. ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ ಪ್ರತಿಬಂಧಕ ವಿಧೇಯಕ ಕುರಿತು ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ದ್ವೇಷ ಭಾಷಣ ಮಸೂದೆ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಲು ರಾಜ್ಯಪಾಲರು ಚಿಂತನೆ ಮಾಡಿದ್ದಾರೆ ಎನ್ನಲಾಗಿದೆ. ರಾಷ್ಟ್ರಪತಿಗಳಿಗೂ ದ್ವೇಷ ಭಾಷಣ ಮಸೂದೆ ಕಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ಬಿಜೆಪಿ ನಾಯಕರು ಹಾಗೂ ಹಿಂದೂಪರ ಸಂಘಟನೆಗಳು ರಾಜ್ಯಪಾಲರಿಗೆ ಮನವಿ ಮಾಡಿದ್ದವು. ಈ ಹಿನ್ನೆಲೆ ಈ ಮಸೂದೆ ಬಗ್ಗೆ ರಾಜ್ಯಪಾಲರು ವಿಸ್ತೃತ ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಇನ್ನು ಒಳಮೀಸಲಾತಿ ಹಂಚಿಕೆಗೆ ಕಾನೂನು ಮಾನ್ಯತೆ ಕೊಡುವ ಪರಿಶಿಷ್ಟ ವರ್ಗಗಳ ಮಸೂದೆ ಬಗ್ಗೆ ಹೆಚ್ಚಿನ ಸ್ಪಷ್ಟನೆ ಕೇಳಿ ಸರ್ಕಾರಕ್ಕೆ ವಿಧೇಯಕ ವಾಪಸ್ ಕಳಿಸಿದ್ದಾರೆ. ಶೇ.17ರಷ್ಟು ಎಸ್‌ಸಿ ಮೀಸಲಾತಿಯನ್ನು ಒಳಪಂಗಡಗಳಿಗೆ 6+6+5ರ ಅನುಪಾತದಲ್ಲಿ ಹಂಚಿಕೆ ಮಾಡಲಾಗಿತ್ತು. ಒಳಮೀಸಲಾತಿಗೆ ಕಾನೂನಾತ್ಮಕ ತೊಡಕು ಬರದಿರಲು ಸರ್ಕಾರ ಮಸೂದೆ ತಂದಿತ್ತು. ಆದ್ರೆ ಇಂದಿರಾ ಸಹಾನಿ ಪ್ರಕರಣದಲ್ಲಿ ಒಟ್ಟಾರೆ ಮೀಸಲಾತಿ ಪ್ರಮಾಣ 50% ಮೀರಬಾರದೆಂಬ ಸುಪ್ರೀಂಕೋರ್ಟ್ ತೀರ್ಪು ಇದೆ. ಈ ಹಿನ್ನೆಲೆ ರಾಜ್ಯಪಾಲರು ಹೆಚ್ಚಿನ ಸ್ಪಷ್ಟನೆ ಕೇಳಿದ್ದಾರೆ. ಸದ್ಯದಲ್ಲೇ ಸರ್ಕಾರ, ರಾಜ್ಯಪಾಲರಿಗೆ ಸ್ಪಷ್ಟೀಕರಣ ಕಳಿಸಿಕೊಡಲಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ಪ್ರಪಾತಕ್ಕೆ ಉರುಳಿದ ಬಸ್ – 8 ಪ್ರಯಾಣಿಕರು ದುರ್ಮರಣ

