ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರಿಂದ ಅಂಕಿತ – SC, ST ಸಮುದಾಯಗಳಿಗೆ ಸರ್ಕಾರದಿಂದ ದೀಪಾವಳಿ ಗಿಫ್ಟ್‌

Public TV
2 Min Read

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾತಿ (SC ST Reservation) ಹೆಚ್ಚಳಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ (Thawarchand Gehlot) ಅಂಕಿತ ಹಾಕಿದ್ದಾರೆ. ಆ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಸರ್ಕಾರ ದೀಪಾವಳಿ ಗಿಫ್ಟ್‌ ನೀಡಿದೆ.

ಎಸ್ಸಿ, ಎಸ್ಟಿ ಸಮುದಾಯಗಳಿಗೆ ಕ್ರಮವಾಗಿ 2% ಮತ್ತು 4% ಮೀಸಲಾತಿಯನ್ನು ಸರ್ಕಾರ ಹೆಚ್ಚಿಸಿದೆ. ಮೀಸಲಾತಿ ಪ್ರಮಾಣ 50% ರಿಂದ 56%ಕ್ಕೆ ಹೆಚ್ಚಿಸಲಾಗಿದೆ. ಇದನ್ನೂ ಓದಿ: ಈ ಬಾರಿ ದೀಪಾವಳಿ ಹಬ್ಬಕ್ಕೆ ಸೂರ್ಯಗ್ರಹಣ ಕಾರ್ಮೋಡ

ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾಗಿರುವ ಪ್ರಮಾಣ 50% ಮೀರಬಾರದೆಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ವಿಶೇಷ ಸಂದರ್ಭದಲ್ಲಿ ಮಾತ್ರ ಮೀಸಲಾತಿ ಪ್ರಮಾಣ ಹೆಚ್ಚಿಸಬಹುದೆಂದೂ ಕೋರ್ಟ್‌ ತಿಳಿಸಿತ್ತು. ಇದೀಗ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಕ್ರಮವನ್ನು ವಿಶೇಷ ಸಂದರ್ಭದ ವ್ಯಾಪ್ತಿಗೆ ತರಲು ಸರ್ಕಾರ ಮುಂದಾಗಿದೆ.

ಈ ಸಂಬಂಧ 9ನೇ ಶೆಡ್ಯೂಲ್‌ಗೆ ಈಗಿನ ನಿರ್ಧಾರ ಸೇರಿಸಲು ಸರ್ಕಾರ ಪ್ರಕ್ರಿಯೆ ಕೈಗೊಳ್ಳಲಿದೆ. ತಮಿಳುನಾಡು 50% ರಿಂದ 69% ಕ್ಕೆ ಮೀಸಲಾತಿ ಏರಿಸಿ 9ನೇ ಪರಿಚ್ಛೇದದ ವ್ಯಾಪ್ತಿಗೆ ಸೇರಿದೆ. ಇದೇ ಮಾದರಿ ಅನುಸರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ವಾಗತಿಸಿದ್ದಾರೆ. ಕರ್ನಾಕಟದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಶಿಫಾರಸ್ಸನ್ನು ಒಪ್ಪಿ ಆದೇಶ ಮಾಡಲು ಸಚಿವ ಸಂಪುಟ ತೀರ್ಮಾನ ತೆಗೆದುಕೊಂಡಿರುವುದು ಗೊತ್ತಿದೆ. ಇದಕ್ಕೆ ಭಾನುವಾರ ರಾಜ್ಯಪಾಲರು ಒಪ್ಪಿಗೆ ಸೂಚಿಸಿರುವುದು ಸಂತಸದ ಸಂಗತಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಿಳಿಸಿದ್ದಾರೆ. ಇದನ್ನೂ ಓದಿ: ಎಡಪಂಥೀಯರಿಂದ ದೇಶದಲ್ಲಿ ವಿಕೃತಿ ನಿರ್ಮಾಣದ ಪ್ರಯತ್ನ – ಕಲ್ಲಡ್ಕ ಪ್ರಭಾಕರ್ ಕಿಡಿ

ಈ ಕುರಿತು ಇಂದು ಅಧಿಕೃತವಾದ ವಿಶೇಷ ರಾಜ್ಯಪತ್ರವನ್ನು ಪ್ರಕಟಿಸಲಾಗಿದೆ. ಇದರಿಂದ ಇನ್ನು ಮುಂದೆ ಅನುಸೂಚಿತ ಜಾತಿಯ ಮೀಸಲಾತಿ ಪ್ರಮಾಣ ಶೇ.15 ರಿಂದ ಶೇ.17 ಕ್ಕೆ ಏರಲಿದ್ದು, ಅನುಸೂಚಿತ ಪಂಗಡಗಳ ಮೀಸಲಾತಿ ಪ್ರಮಾಣ ಶೇ.3 ರಿಂದ ಶೇ.7 ಕ್ಕೆ ಏರಿಸಲಾಗಿದೆ. ನಮ್ಮ ಸರ್ಕಾರವು ಮೀಸಲಾತಿ ಪ್ರಮಾಣ ಹೆಚ್ಚಿಸಿ ಬದ್ದತೆಯಿದ ನಡೆದುಕೊಂಡಿದೆ. ಈ ಮೂಲಕ ಅನುಸೂಚಿತ ಜಾತಿ ಮತ್ತು ಪಂಗಡಗಳ ಜನಾಂಗಕ್ಕೆ ನಮ್ಮ ಸರ್ಕಾರ ದೀಪಾವಳಿ ಕೊಡುಗೆ ಕೊಟ್ಟಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ಅಂಕಿತ ಹಾಕಿರುವ ರಾಜ್ಯಪಾಲರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಆಧ್ಯಾದೇಶಕ್ಕೆ ವಿಧಾನಮಂಡಲದ ಎರಡೂ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *