ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

Public TV
2 Min Read

– ಡಿಕೆಶಿ ಮನೆ ಎದುರಿನ ಶಾಲೆಗೂ ಬಂದಿತ್ತು ಬಾಂಬ್ ಬೆದರಿಕೆ

ಬೆಂಗಳೂರು: ಆಗಾಗ್ಗೆ ಶಾಲೆಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಸಿಎಂ, ಡಿಸಿಎಂ ಮನೆಗಳನ್ನು (CM, DCM Home) ಸ್ಫೋಟಿಸುವುದಾಗಿ ಹುಸಿ ಬೆದರಿಕೆ ಬಂದಿತ್ತು. ಈ ಬೆನ್ನಲ್ಲೇ ಎಚ್ಚೆತ್ತಿರುವ ಪೊಲೀಸ್‌ ಇಲಾಖೆ ಬಾಂಬ್‌ ಬೆದರಿಕೆ ಪ್ರಕರಣಗಳನ್ನ ಭೇದಿಸಲು ವಿಶೇಷ ತನಿಖಾ ತಂಡ (SIT) ರಚನೆ ಮಾಡಿದೆ.

ಕೆಲ ಶಾಲೆಗಳು, ಸರ್ಕಾರಿ ಕಚೇರಿಗಳಿಗೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಬಾಂಬ್‌ ಬೆದರಿಕೆ (Bomb Threat) ಬರುತ್ತಲೇ ಇದೆ. ಬೆಂಗಳೂರು ಒಂದರಲ್ಲೇ 34 ಪ್ರಕರಣಗಳು ದಾಖಲಾಗಿವೆ. ಮುಂಬೈನಲ್ಲಿ 27, ಚೆನ್ನೈ 22 ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಬಾಂಬ್‌ ಬೆದರಿಕೆಗಳನ್ನು ತಪ್ಪಿಸಲು ಹಾಗೂ ಹುಸಿ ಬೆದರಿಕೆಯೊಡ್ಡುವವರ ಹೆಡೆಮುರಿ ಕಟ್ಟಲು ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ತನಿಖಾ ತಂಡ ರಚನೆ ಮಾಡಿದ್ದಾರೆ.

ಸಿಎಂ, ಡಿಸಿಎಂ ಮನೆ ಸ್ಫೋಟಿಸುವುದಾಗಿ ಬೆದರಿಕೆ
ಕಳೆದ ಶನಿವಾರ ಸಿಎಂ ಮತ್ತು ಡಿಸಿಎಂ ಮನೆಗಳಲ್ಲಿ 4 ಕೆಜಿಯಷ್ಟು ಆರ್‌ಡಿಎಕ್ಸ್ ಮತ್ತು ಐಇಡಿ ಸ್ಫೋಟಕ ಇರಿಸಲಾಗಿದೆ. ಅವುಗಳನ್ನು ದೂರದಿಂದಲೇ ಸ್ಫೋಟಿಸಲಾಗುತ್ತದೆ ಎಂದು ಇ-ಮೇಲ್‌ ಮೂಲಕ ಹುಸಿ ಬೆದರಿಕೆ ಬಂದಿತ್ತು. ಶನಿವಾರ ಬೆಳಗಿನ ಜಾವ 4:20ರ ಸುಮಾರಿಗೆ, ಆರ್ನಾ ಅಶ್ವಿನ್ ಶೇಖರ್ (aarna.ashwinshekher@outlook.com) ಮೇಲ್ ಐಡಿಯಿಂದ ಸಿಎಂ ಸಿದ್ದರಾಮಯ್ಯ ಅವರ ಅಧಿಕೃತ ಇಮೇಲ್ ಐಡಿ (cm.kar@nic.in) ಮತ್ತು ಡಿಸಿಎಂ ಅವರ ವೈಯಕ್ತಿಕ ಇಮೇಲ್ ಐಡಿ dkshivakumar1@gmail.com ಗೆ ಇಮೇಲ್ ಬೆದರಿಕೆ ಸಂದೇಶ ಬಂದಿತ್ತು.

ಇದರ ನಂತರ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ಸಿಎಂ ಮತ್ತು ಡಿಸಿಎಂ ಅವರ ನಿವಾಸಗಳನ್ನು ಸಂಪೂರ್ಣ ಶೋಧ ನಡೆಸಲಾಗಿತ್ತು. ಬಳಿಕ ಹುಸಿ ಬಾಂಬ್‌ ಬೆದರಿಕೆ ಅನ್ನೋದು ಗೊತ್ತಾಯ್ತು. ಬಳಿಕ ಅರ್ನಾ ಅಶ್ವಿನ್ ಶೇಖರ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬೆನ್ನಲ್ಲೇ ಎಸ್‌ಐಟಿ ರಚಿಸಲಾಗಿದೆ.

ಬಂಗಾಳದಲ್ಲಿ ಓರ್ವನ ಬಂಧನ
ಕಳೆದ ವರ್ಷ ಅಕ್ಟೋಬರ್‌ 4ರಂದು ಬಸವನಗುಡಿಯ ಬಿಐಟಿ ಕಾಲೇಜಿಗೆ ಇ-ಮೇಲ್‌ ಮೂಲಕ ಆರೋಪಿಯು ಬಾಂಬ್‌ ಬೆದರಿಕೆ ಹಾಕಿದ್ದ. ಕಾಲೇಜು ಆವರಣದಲ್ಲೇ ಹೈಡ್ರೋಜನ್‌ ಸುಧಾರಿತ ಐಇಡಿ (IED) ಇಟ್ಟಿದ್ದು, ಅದನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ವಿವಿ ಪುರಂ ಪೊಲೀಸರು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ಆರೋಪಿಯನ್ನ ಬಂಧಿಸಿದ್ದರು.

ಆರೋಪಿಯಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿತ್ತು. ವಿಚಾರಣೆ ವೇಳೆ ಆರೋಪಿ ಇದೇ ರೀತಿ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅನ್ನೋದು ಗೊತ್ತಾಗಿತ್ತು.

ಇದಕ್ಕೂ ಮುನ್ನ ಹಲವು ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿತ್ತು. ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ ಬಂದಿತ್ತು.

Share This Article