ಕ್ರೀಡಾಕ್ಷೇತ್ರಕ್ಕೆ ಪ್ರಾಮುಖ್ಯತೆ – ಅಮೃತ ಕ್ರೀಡಾ ಯೋಜನೆಯಡಿ 75 ಕ್ರೀಡಾಪಟುಗಳಿಗೆ ಕ್ರೀಡಾ ತರಬೇತಿ: ಬೊಮ್ಮಾಯಿ

Public TV
2 Min Read

ಬೆಂಗಳೂರು: ಅಮೃತ ಮಹೋತ್ಸವ ಕ್ರೀಡಾ ಯೋಜನೆಯಡಿ (Amrutha Mahotsava Sports Scheme) 75 ಕ್ರೀಡಾಪಟುಗಳಿಗೆ ತರಬೇತಿ ನೀಡಿ, ಮುಂದಿನ ಒಲಿಂಪಿಕ್ಸ್‌ನಲ್ಲಿ( Olympics) ಭಾಗವಹಿಸಲು ಹಾಗೂ ಭಾರತಕ್ಕೆ ಪದಕ ಗೆಲ್ಲಿಸುವ ಗುರಿಯನ್ನು ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದ್ದಾರೆ.

61ನೇ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2022 (National Athletics Championships 2022) ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಕ್ರೀಡಾಕ್ಷೇತ್ರಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ವರ್ಷ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗಿದೆ. ಕಬಡ್ಡಿ, ಖೋ ಖೋ, ವಾಲಿಬಾಲ್, ಕುಸ್ತಿ, ಚಕ್ಕಡಿ ಓಡಿಸುವುದು ಮತ್ತು ಕರಾವಳಿಯ ಕಂಬಳ ಸೇರಿದಂತೆ ಗ್ರಾಮೀಣ ಕ್ರೀಡೆಗಳನ್ನು ಗ್ರಾಮ, ತಾಲೂಕು, ಜಿಲ್ಲೆ ಹಾಗೂ ಅಂತಿಮವಾಗಿ ರಾಜ್ಯಮಟ್ಟದಲ್ಲಿ ಏರ್ಪಡಿಸಲಾಗುವುದು ಎಂದರು. ಇದನ್ನೂ ಓದಿ: ಬಿಸಿಸಿಐಗೆ ಜಿಎಸ್‍ಟಿ ಬರೆ – 2023ರ ವಿಶ್ವಕಪ್‍ಗೂ ಮುನ್ನ 955 ಕೋಟಿ ರೂ. ನಷ್ಟದ ಭೀತಿ

ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಭಾರತ ರಾಷ್ಟ್ರವನ್ನು ಪ್ರತಿನಿಧಿಸುವ ಕ್ರೀಡಾಪಟುವಿಗೆ ಇಡೀ ದೇಶ ಜನ ಒಗ್ಗಟ್ಟಾಗಿ ಅವರನ್ನು ಹುರಿದುಂಬಿಸುತ್ತಾರೆ, ಹೀಗೆ ಕ್ರೀಡೆಯ ಮೂಲಕ ಇಡೀ ಭಾರತವನ್ನು ಜೋಡಿಸಬಹುದಾಗಿದೆ. ಬೆಂಗಳೂರಿನ ಬಳಿ ಕ್ರೀಡೆಗಾಗಿ ಸೆಂಟರ್ ಆಫ್ ಎಕ್ಸ್ ಲೆನ್ಸ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗುತ್ತಿರುವ ಈ ಕೇಂದ್ರದಲ್ಲಿ ಕ್ರೀಡಾಪಟುಗಳಿಗೆ ಅತ್ಯುತ್ತಮ ತರಬೇತಿ, ಸಲಕರಣೆಗಳು, ಮೂಲಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: 2023ರ ಏಕದಿನ AisaCup ಟೂರ್ನಿಗೆ ಪಾಕಿಸ್ತಾನಕ್ಕೆ ಲಗ್ಗೆ ಇಡಲಿದೆ ಭಾರತ

ಪ್ರಧಾನಿ ಮೋದಿಯವರು (Narendra Modi) ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಖೇಲೋ ಇಂಡಿಯಾ, ಫಿಟ್ ಇಂಡಿಯಾ, ಜೀತೋ ಇಂಡಿಯಾ ಕಾರ್ಯಕ್ರಮಗಳ ಮೂಲಕ ಭಾರತದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದ್ದಾರೆ. ಒಲಿಂಪಿಕ್ಸ್‌, ಏಷಿಯನ್, ಕಾಮನ್ ವೆಲ್ತ್, ನ್ಯಾಷನಲ್ ಗೇಮ್ಸ್‌ಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳೊಂದಿಗೆ ಖುದ್ದು ಮಾತನಾಡಿ ಪ್ರೋತ್ಸಾಹಹಿಸಿದ್ದಾರೆ. ಈ ಕಾರಣದಿಂದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ  (Tokyo Olympics) ಭಾರತ ಅತಿ ಹೆಚ್ಚಿನ ಪದಕಗಳನ್ನು ಗೆಲ್ಲಲು ಸಾಧ್ಯವಾಯಿತು. ಅವರ ನೇತೃತ್ವದಲ್ಲಿ ಮುಂದಿನ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲುವ ನಿರೀಕ್ಷೆ ಇದೆ ಎಂದರು.

ಕ್ರೀಡೆ ಎನ್ನುವುದು ಪ್ರಮುಖವಾದ ಚಟುವಟಿಕೆ. ಶಾಲಾಮಟ್ಟದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿಹೊಂದಿರುವ ಮಕ್ಕಳು, ಭವಿಷ್ಯದಲ್ಲಿ ರಾಷ್ಟ್ರೀಯ ಕ್ರೀಡಾಪಟುಗಳಾಗುತ್ತಾರೆ. ಕ್ರೀಡೆಯಲ್ಲಿ ನಿರಂತರವಾದ ಅಭ್ಯಾಸ, ಕಠಿಣ ಪರಿಶ್ರಮ, ಸಮರ್ಪಣೆ ಬಹಳ ಮುಖ್ಯ. ಕಠಿಣ ಪರಿಶ್ರಮ ಹಾಗೂ ಶಿಸ್ತುಬದ್ಧ ಜೀವನ ಉತ್ತಮ ಚಾರಿತ್ರ್ಯವನ್ನು ಬೆಳೆಸುತ್ತದೆ. ಕ್ರೀಡೆಗಳು ನಮ್ಮಲ್ಲಿ ಸ್ಪರ್ಧಾ ಮನೋಭಾವ, ನಮ್ಮಲ್ಲಿನ ಶಕ್ತಿ, ಗೆಲ್ಲುವ ಆತ್ಮವಿಶ್ವಾಸ ಹಾಗೂ ಸೋತಾಗ ಮನೋಸ್ಥೈರ್ಯವನ್ನು ಕಲಿಸುತ್ತದೆ. ಕ್ರೀಡೆಗಳು ನಮಗೆ ತಂಡಸ್ಪೂರ್ತಿಯನ್ನು ಹಾಗೂ ಉತ್ತಮ ಸ್ನೇಹವನ್ನೂ ನೀಡುತ್ತದೆ. ಬಹಳ ಮುಖ್ಯವಾಗಿ, ಕ್ರೀಡೆಗಳು ರಾಷ್ಟ್ರಕ್ಕಾಗಿ ಆಡುವ ಶಕ್ತಿಯನ್ನು ನೀಡುತ್ತದೆ. ಆದಕಾರಣ ಕ್ರೀಡೆ ಎಲ್ಲರ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು ಉತ್ತಮ ವಾತಾವರಣವನ್ನು ಹೊಂದಿದ ಕಾಸ್ಮಪಾಲಿಟನ್ ನಗರ. ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಕ್ರಿಡಾಪಟುಗಳು ಉತ್ತಮವಾಗಿ ಆಡುವ ಜೊತೆಗೆ ಬೆಂಗಳೂರಿನಲ್ಲಿನ ನಿಮ್ಮ ವಾಸ್ತವ್ಯದ ಆನಂದವನ್ನೂ ಪಡೆಯಿರಿ. ಕ್ರೀಡೆಯನ್ನು ಗೆಲ್ಲಲು ಆಡುವುದು ಹಾಗೂ ಸೋಲಬಾರದು ಎಂದು ಆಡುವುದಿದೆ. ಆದರೆ ಕ್ರೀಡಾಪಟುಗಳು ಎಂದಿಗೂ ಗೆಲ್ಲಲೇಬೇಕೆಂದು ಆಡುವ ಮನೋಭಾವದಿಂದ ಸಕಾರಾತ್ಮಕವಾಗಿ ಆಡಬೇಕು ಎಂದು ಕ್ರೀಡಾಕೂಟದಲ್ಲಿ ನೆರೆದಿದ್ದ ಎಲ್ಲ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *