ಐಪಿಎಲ್ ಫೈನಲ್‍ನಲ್ಲಿ ಕರ್ನಾಟಕದ ಕಲಾ ತಂಡಗಳ ಮೆರುಗು

Public TV
1 Min Read

ಮಂಡ್ಯ: 15ನೇ ಆವೃತ್ತಿ ಐಪಿಎಲ್‍ನ ಫೈನಲ್ ಪಂದ್ಯ ಇಂದು ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವೆ ನಡೆಯಲಿದ್ದು, ಈ ಮೂಲಕ ಈ ಬಾರಿಯ ಐಪಿಎಲ್‍ಗೆ ವಿಧ್ಯುಕ್ತ ತೆರೆ ಬೀಳಲಿದೆ. ಪಂದ್ಯಕ್ಕೂ ಮೊದಲು ಐಪಿಎಲ್‍ನ ಸಮಾರೋಪ ಸಮಾರಂಭ ಹಮ್ಮಿಕೊಂಡಿರುವ ಬಿಸಿಸಿಐ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕದ ಕಲಾ ತಂಡಗಳು ಮೆರುಗು ನೀಡಲಿವೆ.

ಇಡೀ ದೇಶದ ಕ್ರೀಡಾಭಿಮಾನಿಗಳ ಚಿತ್ತ ಇಂದಿನ ಐಪಿಎಲ್ ಫೈನಲ್ ಪಂದ್ಯದತ್ತ ನೆಟ್ಟಿದೆ. ಗುಜರಾತ್‍ನ ಅಹಮದಾಬಾದ್‍ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಸೆಣಸಾಟ ನೋಡಲು ಕ್ರಿಕೆಟ್ ಪ್ರೇಮಿಗಳು ಉತ್ಸುಕರಾಗಿದ್ದಾರೆ. ಐಪಿಎಲ್‍ನ ಅಂತಿಮ ಮಂದ್ಯದಲ್ಲಿ ಆರ್‌ಸಿಬಿ ತಂಡ ಇಲ್ಲದಿದ್ದರೂ ಕನ್ನಡಿಗರಿಗೆ ಬಹಳ ವಿಶೇಷವಾಗಿದೆ. ಇದನ್ನೂ ಓದಿ: ಐಪಿಎಲ್ ಫಿನಾಲೆಯಲ್ಲಿ ಅಮೀರ್ ಖಾನ್ ಸಿನಿಮಾ ‘ಲಾಲ್ ಸಿಂಗ್ ಛಡ್ಡಾ’ ಟ್ರೈಲರ್ ರಿಲೀಸ್

ಫೈನಲ್ ಪಂದ್ಯಕ್ಕೂ ಮುನ್ನ ಸಾಂಸ್ಕೃತಿಕ ಕಲಾವೈಭವ ಮೇಳೈಸಲಿದೆ. ಕಾರ್ಯಕ್ರಮಕ್ಕೆ ಮೆರಗು ನೀಡಲು ದೇಶದ ನಾನಾ ಭಾಗಗಳಿಂದ 300ಕ್ಕೂ ಹೆಚ್ಚು ಕಲಾವಿದರು ಪಾಲ್ಗೊಳ್ಳಲ್ಲಿದ್ದಾರೆ. ಕರ್ನಾಟಕದಿಂದ ಈ ಪೈಕಿ ಮಂಡ್ಯದ ಚಿಕ್ಕರಸಿನಕೆರೆ ಚಿಕ್ಕಬೋರಯ್ಯ ಹಾಗೂ ಸಂತೆಕಸಲಗೆರೆ ಬಸವರಾಜು ನೇತೃತ್ವದ ಜಾನಪದ ಕಲಾತಂಡಗಳು ತಮ್ಮ ಪ್ರದರ್ಶನ ಪ್ರಸ್ತುತ ಪಡಿಸಲಿದೆ. 10 ಮಂದಿ ಒಳಗೊಂಡ ಕಲಾತಂಡದಿಂದ ನಾಡಿನ ಪರಂಪರೆಯನ್ನು ಪ್ರತಿಬಿಂಬಿಸುವ ಪೂಜಾಕುಣಿತದ ಮೂಲಕ ರಂಜಿಸಲಿದೆ. ಅಲ್ಲದೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಡೊಳ್ಳು ಕುಣಿತ ತಂಡವೂ ಇಂದಿನ ಕಾರ್ಯಕ್ರಮದ ಮೆರುಗು ಹೆಚ್ಚಿಸಲಿದೆ. ಇದನ್ನೂ ಓದಿ: ಟೈಟಾನ್ಸ್ Vs ರಾಯಲ್ಸ್ ಫೈನಲ್ – ಯಾರಾಗ್ತಾರೆ ಚಾಂಪಿಯನ್?

ಇಡೀ ವಿಶ್ವವೇ ಮೆಚ್ಚಿರುವ ಐಪಿಎಲ್ ಫೈನಲ್‍ಗೆ ಕನ್ನಡಿಗರ ನೆಚ್ಚಿನ ತಂಡ ಆರ್‌ಸಿಬಿ ಇಲ್ಲ ಎಂಬ ಬೇಸರ ಒಂದೆಡೆಯಾದ್ರೆ, ಆ ಬೇಸರವನ್ನು ಕರ್ನಾಟಕದ ಕಲಾತಂಡಗಳು ನಾಡಿನ ಪರಂಪರೆ ಬಿಂಬಿಸುವ ಕಲೆಗಳ ಮೂಲಕ ಮರೆಸಿ ಮೆರೆಸಲು ಹೊರಟಿರುವುದು ಖುಷಿಯ ವಿಚಾರವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *