ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ

Public TV
2 Min Read

– ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ಭಾಷಾಂತಕರನ್ನು ನೋಡುತ್ತಾ ಕನ್ನಡಿಗರು ಸುಮ್ಮನೆ ಇರಲ್ಲ

ಬೆಂಗಳೂರು: ಕನ್ನಡದ ಕೆಚ್ಚನ್ನು ಮಣಿಸಿ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ಕುಗ್ಗಿಸುವ ಸಕಲ ಪ್ರಯತ್ನವನ್ನೂ ಕೇಂದ್ರ ಸರ್ಕಾರ ಮಾಡುತ್ತಿದೆ ಎನ್ನುವುದಕ್ಕೆ ಇಲ್ಲಿದೆ ಇನ್ನೊಂದು ಸಾಕ್ಷಿ. ಈಗ ನೇರವಾಗಿ ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ನಡೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಕೇಂದ್ರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಟ್ಟಿಟ್ಟರ್‌ನಲ್ಲಿ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಟ್ವೀಟ್‍ನಲ್ಲಿ ಏನಿದೆ?
103.3 ಎಫ್‍ಎಂ ರೇನ್‍ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿ ಕತ್ತು ಕುಯ್ಯುವ ಕೆಲಸ ಕೇಂದ್ರ ಮಾಡ್ತಿದೆ. ಸೂರ್ಯೋದಯಕ್ಕೆ ಮುನ್ನವೇ ಪ್ರಸಾರ ಆರಂಭಿಸಿ ರಾತ್ರಿ 11ರ ತನಕ ಸತತ 18 ಗಂಟೆ ಕಾಲ ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ನೀಡುತ್ತಿರುವ 103.3 ಎಫ್‍ಎಂ ರೇನ್‍ಬೋ ಕನ್ನಡ ಕಾಮನಬಿಲ್ಲು ರೇಡಿಯೋ ವಾಹಿನಿಯ ಕತ್ತು ಕುಯ್ಯುವ ಕೆಲಸಕ್ಕೆ ಕೇಂದ್ರ ಸರ್ಕಾರ ಹೊರಟಿರುವುದು ಅಕ್ಷಮ್ಯ. ಕನ್ನಡಕ್ಕೆ ಕೊಡಲಿ ಪೆಟ್ಟು. ರೇನ್ ಬೋ ಕನ್ನಡ ಕಾಮನಬಿಲ್ಲು. ಕೇವಲ ರೇಡಿಯೋ ವಾಹಿನಿ ಮಾತ್ರವಲ್ಲ, ಕನ್ನಡಿಗರ ಹೃದಯಬಡಿತ, ಕನ್ನಡದ ಅಸ್ಮಿತೆ ಕೂಡ. ಆದರೆ, ಕೇಂದ್ರ ಸರ್ಕಾರ ಕನ್ನಡಿಗರ ಭಾವನೆಗಳ ಜೊತೆ ಚೆಲ್ಲಾಟ ಆಡುತ್ತಿದೆ. ಅಧಿಕಾರಿಗಳ ಮೂಲಕ ಕನ್ನಡಮ್ಮನ ರಕ್ತ ಬಗೆಯುವ ಹೀನ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಆಳುವುದು ಬೇರೆ, ಆಡಳಿತ ಬೇರೆ ಈ ವ್ಯತ್ಯಾಸ ಇದೀಗ ಕರ್ನಾಟಕದಲ್ಲಿ ಕಾಣಬಹುದಾಗಿದೆ: ಬೊಮ್ಮಾಯಿ

ಈ ಹಿಂದೆ ಕನ್ನಡಿಗರ ಮನೆಮನದಲ್ಲಿ ತುಂಬಿದ್ದ ಅಮೃತವರ್ಷಿಣಿಯನ್ನು ಮುಗಿಸಲಾಯಿತು. ಈಗ ಕನ್ನಡ ಕಾಮನಬಿಲ್ಲನ್ನು ಮುಗಿಸಲು ಹೊರಟಿದ್ದಾರೆ. ಕನ್ನಡ ವಿರೋಧಿ ಕೇಂದ್ರ ಸರ್ಕಾರ, ಕನ್ನಡದ್ರೋಹಿ ಅಧಿಕಾರಿಗಳ ಕಪಿಮುಷ್ಠಿಯಲ್ಲಿ ಸಿಲುಕಿರುವ ಕನ್ನಡದ ಆಕ್ರಂದನವನ್ನು ಇನ್ನು ಸಹಿಸಲು ಸಾಧ್ಯವಿಲ್ಲ. ಆಯಕಟ್ಟಿನಲ್ಲಿ ಕೂತಿರುವ ಹಿರಿಯ ಅಧಿಕಾರಿಗಳು ಕಸಾಯಿಗಳಂತೆ ಸಾವಿರಾರು ವರ್ಷಗಳ ಅಭಿಜಾತ ಭಾಷೆ ಕನ್ನಡದ ಮೇಲೆ ದಾಳಿ ನಡೆಸಿ ಕ್ರೂರವಾಗಿ ವಧೆ ಮಾಡುತ್ತಿದ್ದಾರೆ. ಕನ್ನಡನಾಡನ್ನು ಉದ್ಧಾರ ಮಾಡುತ್ತೇವೆಂದು ಗೆದ್ದುಹೋದ ಸಂಸದ ಮಹಾಶಯರು ಕನ್ನಡಕ್ಕೆ ಆಗುತ್ತಿರುವ ಅನ್ಯಾಯವನ್ನು ಸಹಿಸುತ್ತಿರುವುದು ಹೊಣೆಗೇಡಿತನವೇ ಸರಿ. ಕನ್ನಡಿಗರು ಸಹಿಷ್ಣುಗಳು, ಸೌಮ್ಯರು ಹೌದು. ಹಾಗೆಂದು, ತಾಯಿಭಾಷೆಗೆ ಕೊಳ್ಳಿ ಇಡುತ್ತಿರುವ ಭಾಷಾಂತಕರನ್ನು ನೋಡುತ್ತಾ ಸುಮ್ಮನೆ ಕೂರಲಾರರು, ನೆನಪಿರಲಿ. ಸಂಸದರೆಲ್ಲರೂ ದನಿಯೆತ್ತಿ ಈ ರೇಡಿಯೋ ವಾಹಿನಿಯನ್ನು ಉಳಿಸಬೇಕು. ಮುಚ್ಚುವುದು ಅಥವಾ ಇನ್ನೊಂದರಲ್ಲಿ ವಿಲೀನ ಮಾಡುವುದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇದನ್ನೂ ಓದಿ: ಅಮಾನತು ಆದೇಶ ರದ್ದು – ಮಹಾರಾಷ್ಟ್ರದ 12 ಬಿಜೆಪಿ ಶಾಸಕರಿಗೆ ಗೆಲುವು

ಎಫ್‍ಎಂ ರೇನ್‍ಬೋದ ಬಹುತೇಕ ನಿರೂಪಕರು ಅರೆಕಾಲಿಕ ಉದ್ಯೋಗಿಗಳು. ಸ್ಪಷ್ಟ ಕನ್ನಡ, ಅಚ್ಚ ಕನ್ನಡದ ರಾಯಭಾರಿಗಳು. ಅರ್ಥಪೂರ್ಣ ಕಾರ್ಯಕ್ರಮ, ಸುಶ್ರಾವ್ಯ ಹಾಡುಗಳ ಮೂಲಕ ಕೇಳುಗರೊಂದಿಗೆ ಸಂವಾದಿಯಾದವರು. ಈಗ ವಾಹಿನಿಯನ್ನೇ ನಿಲ್ಲಿಸುವ ಒಳಸಂಚು ಇವರೆಲ್ಲರಿಗೂ ಆಗುವ ಅನ್ಯಾಯ ಹಾಗೂ ಕನ್ನಡ, ಕನ್ನಡಿಗರಿಗೆ ಮಾಡುವ ಅಪಚಾರ. ಕನ್ನಡಿಗರಿಗೆ ಕಿರುಕುಳ ನೀಡಿ ವಿಕೃತ ಸಂತೋಷಪಡುವ ಮನಃಸ್ಥಿತಿ ಅಳಿಯಲಿ. ಭಾರತ ಒಕ್ಕೂಟ ರಾಜ್ಯಗಳ ಆಗರ ಎನ್ನುವುದು ನೆನಪಿರಲಿ. ಆ ಆಶಯಕ್ಕೆ ಮುಕ್ಕಾಗುವುದು ಖಂಡಿತಾ ಬೇಡ. ಕನ್ನಡದ ಹಂತಕರಿಗೆ ಧಿಕ್ಕಾರ. ಇದನ್ನೂ ಓದಿ: SC/ST ಬಡ್ತಿ ಮೀಸಲಾತಿ: ಮಾನದಂಡ ರೂಪಿಸಲು ಸುಪ್ರೀಂ ನಿರಾಕರಣೆ

Share This Article
Leave a Comment

Leave a Reply

Your email address will not be published. Required fields are marked *