ಪ್ರವಾಹ ತಗ್ಗುತ್ತಿರೋ ಬೆನ್ನಲ್ಲೇ ಮತ್ತೆ ಮಳೆ ಭೀತಿ

Public TV
1 Min Read

ಬೆಂಗಳೂರು/ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆಯಿಂದಾದ ಅವಾಂತರದಿಂದ ಸುಧಾರಿಸೋ ಹೊತ್ತಲ್ಲೇ, ನಾಳೆಯಿಂದ 19ರ ವರಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಚೆನ್ನೈನ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗುತ್ತಿದ್ದು ಬಂಗಾಳಕೊಲ್ಲಿಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಗಂಟೆಗೆ 76 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.

ಕರಾವಳಿ ಭಾಗದಲ್ಲಿ ಅತಿಹೆಚ್ಚಿನ ಮಳೆಯಾಗಲಿದೆ. ದಕ್ಷಿಣ ಒಳನಾಡಿನಲ್ಲಿ 16ರಿಂದ 18ರವೆಗೆ ಮಳೆಯಾಗಲಿದೆ. ಬೆಂಗಳೂರು, ಕೋಲಾರ, ಮಂಡ್ಯ, ಮೈಸೂರು ತುಮಕೂರು ಹಾಗೂ ಸುತ್ತ ಮುತ್ತ ಸಾಧಾರಣ ಮಳೆಯಾದರೆ, ಬೆಂಗಳೂರಿನಲ್ಲಿ ಒಮ್ಮೊಮ್ಮೆ ಅತಿ ಹೆಚ್ಚು ಮಳೆಯಾಗೋ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಪಬ್ಲಿಕ್ ಟಿವಿಗೆ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಹೇಳಿದ್ದಾರೆ.

ಮಲೆನಾಡಿನಲ್ಲಿ ಮಳೆಯ ಅಬ್ಬರ ಕೊಂಚ ಕಮ್ಮಿಯಾಗಿದ್ದರೂ ಅದರಿಂದಾದ ಅನಾಹುತ ಮಾತ್ರ ಇನ್ನೂ ನಿಂತಿಲ್ಲ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಆಲೇಖಾನ್ ಹೊರಟ್ಟಿ ಗ್ರಾಮದ ಸುತ್ತ ಗುಡ್ಡ ಕುಸಿದಿದ್ದರಿಂದ ಕಳೆದೊಂದು ವಾರದಿಂದ ಜನ ಹೊರ ಬರಲಾಗದೇ ಗ್ರಾಮದಲ್ಲೇ ಸಿಲುಕಿಕೊಂಡಿದ್ದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯಿಂದ 12 ಮಂದಿಯನ್ನು ರಕ್ಷಿಸಲಾಗಿದೆ.

ಈ ವೇಳೆ ದುರ್ಗಮ ಹಾದಿಯಲ್ಲಿ ಇಬ್ಬರು ರೋಗಿಗಳನ್ನ ಸಿಬ್ಬಂದಿ ಸುಮಾರು 2 ಕಿ.ಮೀ ಹೊತ್ತುಕೊಂಡೇ ಬಂದ ದೃಶ್ಯ ಮನಕಲಕುವಂತಿತ್ತು. ವಾರದ ಹಿಂದೆ ಇದೇ ಗ್ರಾಮದಲ್ಲಿ ಸುಮಾರು 76 ಮಂದಿಯನ್ನು ಸೈನಿಕರು ರಕ್ಷಿಸಿ, ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ರು. ಆದ್ರೆ ಈ 12 ಜನ ಮಾತ್ರ ಊರು ಬಿಟ್ಟು ಬರಲು ಒಪ್ಪದೇ ಇಲ್ಲೇ ಉಳಿದುಕೊಂಡಿದ್ದರು. ಇದೀಗ ಆ 12 ಮಂದಿಯನ್ನು ರಕ್ಷಿಸಲಾಗಿದೆ.

ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‍ನಲ್ಲಿ ಆಗಿರುವ ಅನಾಹುತಗಳನ್ನ ರಿಪೇರಿ ಮಾಡೋದು ಕಷ್ಟಸಾಧ್ಯ. 20 ಕಿ.ಮೀ. ವ್ಯಾಪ್ತಿಯ ಮಾರ್ಗದಲ್ಲಿ 20ಕ್ಕೂ ಹೆಚ್ಚು ಕಡೆ ಭೂಕುಸಿತ ಉಂಟಾಗಿದೆ. ಬಲಭಾಗಕ್ಕೆ ಬೆಟ್ಟ-ಗುಡ್ಡ, ಎಡಭಾಗಕ್ಕೆ ಪ್ರಪಾತ. ಇನ್ನು ಇಲ್ಲಿ ಭೂಕುಸಿತದ ಜೊತೆ ಭೂಮಿ ಬಾಯ್ಬಿಟ್ಟಿದ್ದು ಇದನ್ನ ಹೇಗೆ ದುರಸ್ಥಿ ಮಾಡುತ್ತಾರೋ ಗೊತ್ತಿಲ್ಲ. ಸದ್ಯಕ್ಕೆ ಚಾರ್ಮಾಡಿ ದುರಸ್ಥಿ ಅಸಾಧ್ಯ ಅಂತಾನೇ ಹೇಳಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *