ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಯ್ತು, ಮತ್ತೆ ರಾಜ್ಯಕ್ಕೆ ಬರಲಿದ್ದಾರೆ ಯೋಗಿ

Public TV
1 Min Read

ಬೆಂಗಳೂರು: ಬಿಜೆಪಿಯ ಚುನಾವಣಾ ಕಾರ್ಯತಂತ್ರ ಬದಲಾಗಿದ್ದು ಮತ್ತೆ ರಾಜ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಲಿದ್ದಾರೆ.

ಜನವರಿ 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಲಿದ್ದಾರೆ. ಬೆಂಗಳೂರು ನಗರ ಕೇಂದ್ರಿತ ಪರಿವರ್ತನಾ ಸಮಾವೇಶ ಗೋವಿಂದರಾಜನಗರದಲ್ಲಿ ನಡೆಯಲಿದ್ದು, ಈ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಷಣ ಮಾಡಲಿದ್ದಾರೆ.

ಡಿ.21ರಂದು ಹುಬ್ಬಳ್ಳಿಯಲ್ಲಿ ನಡೆದಿದ್ದ ಪರಿವರ್ತನಾ ಸಮಾವೇಶದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಬಳಿಕ ರಾಜ್ಯದ ಕಾಂಗ್ರೆಸ್ ನಾಯಕರು ಯೋಗಿಯನ್ನು ಟೀಕಿಸಿ ಹೇಳಿಕೆ ನೀಡಿದ್ದರು.

ಯಾಕೆ ಯೋಗಿಗೆ ಮಣೆ?
ಬಿಜೆಪಿ ಪಾಳೆಯದಲ್ಲಿ ಯೋಗಿ ಆದಿತ್ಯನಾಥ್ ಈಗ ಸ್ಟಾರ್ ಪ್ರಚಾರಕರಾಗಿದ್ದು ಉತ್ತರ ಪ್ರದೇಶ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದ್ದ ಹಿನ್ನೆಲೆಯಲ್ಲಿ ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತ್ತು. ಇದಾದ ಬಳಿಕ ಗುಜರಾತ್ ನಲ್ಲಿ ಯೋಗಿ ಭಾಷಣ ಮಾಡಿದ್ದು ಅಲ್ಲೂ ಯಶಸ್ಸು ಸಿಕ್ಕಿತ್ತು.

ಗುಜರಾತ್ ಚುನಾವಣೆಯ ಒಟ್ಟು 182 ಕ್ಷೇತ್ರಗಳನ್ನು ಬಿಜೆಪಿ ಎ, ಬಿ, ಸಿ ಎಂದು ಮೂರು ಭಾಗಗಳಾಗಿ ವಿಂಗಡಿಸಿತ್ತು. ಜಯ ಸಿಗುವ ಕ್ಷೇತ್ರಗಳನ್ನು ಎ, ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳನ್ನು ಬಿ, ಗೆಲ್ಲಲು ಸಿಕ್ಕಾಪಟ್ಟೆ ಕಷ್ಟವಿದೆ ಎನ್ನುವ ಕ್ಷೇತ್ರಗಳನ್ನು ಸಿ ಗುಂಪಿಗೆ ಸೇರಿಸಿತ್ತು. ಬಿ ಮತ್ತು ಸಿ ಕ್ಷೇತ್ರಗಳಲ್ಲಿ ಗೆಲುವು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ಈ 35 ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಳಸಿಕೊಂಡಿತ್ತು. ಪರಿಣಾಮ ಬಿ ಮತ್ತು ಸಿ ಗುಂಪಿನಲ್ಲಿದ್ದ ಒಟ್ಟು 35 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಗೆಲುವು ಕಂಡಿತ್ತು. ಈ ಎಲ್ಲ ಕಾರಣಕ್ಕಾಗಿ ಗುಜರಾತ್ ತಂತ್ರವನ್ನೇ ಬಿಜೆಪಿ ಹೈಕಮಾಂಡ್ ಕರ್ನಾಟಕದಲ್ಲೂ ಬಳಸಲು ಮುಂದಾಗುತ್ತಿದ್ದು, ಯೋಗಿ ಆದಿತ್ಯನಾಥ್ ಅವರನ್ನು ಸ್ಟಾರ್ ಪ್ರಚಾರಕರನ್ನಾಗಿ ಬಳಸಲು ಮುಂದಾಗಿದೆ ಎನ್ನಲಾಗಿದೆ.

ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದು ಹೋದ ಬಳಿಕ ಕಾಂಗ್ರೆಸ್ #YogiInsultsKarnataka ಹ್ಯಾಶ್ ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯನ್ನು ಟೀಕಿಸಿತ್ತು.

https://youtu.be/c5Mb4OAwpa8

Share This Article
Leave a Comment

Leave a Reply

Your email address will not be published. Required fields are marked *