ಸೆಕೆಂಡ್ ಲಿಸ್ಟ್ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಬಂಡಾಯ- ಬಿಜೆಪಿ, ಜೆಡಿಎಸ್ ಸೇರ್ಪಡೆ ಸಾಧ್ಯತೆ

Public TV
2 Min Read

ಬೆಂಗಳೂರು: ವಿಧಾನಸಭೆ ಚುನಾವಣೆ (Assembly Election 2023) ಗೆ ಕೌಂಟ್‍ಡೌನ್ ಶುರುವಾಗಿದೆ. 2ನೇ ಲಿಸ್ಟ್ ರಿಲೀಸ್ ಮಾಡಿದ ಕಾಂಗ್ರೆಸ್‍ಗೆ ಇದೀಗ ಅಸಮಾಧಾನದ ಶಾಕ್ ಎದುರಾಗಿದೆ. ಪಕ್ಷದ ವಿರುದ್ಧವೇ ಟಿಕೆಟ್ ವಂಚಿತರು ಸಿಡಿದೆದ್ದಿದ್ದಾರೆ. ಮತ್ತೆ ಪಕ್ಷಾಂತರ ಪರ್ವ ಆರಂಭವಾಗುವ ಸಾಧ್ಯತೆ ಇದೆ. ಇದು ಕಾಂಗ್ರೆಸ್‍ಗೆ ನುಂಗಲಾರದ ತುತ್ತಾಗಿದೆ.

ಕಲಘಟಗಿ ಕಾಂಗ್ರೆಸ್ ಟಿಕೆಟ್ (Kalaghatagi Congress Ticket) ಆಕಾಂಕ್ಷಿಯಾಗಿದ್ದ ನಾಗರಾಜ್ ಛಬ್ಬಿಗೆ ಪ್ರತಿಬಾರಿಯಂತೆ ಈ ಬಾರಿಯೂ ಕೂಡ ಟಿಕೆಟ್ ಮಿಸ್ ಆಗಿದೆ. ಪ್ರತಿ ಬಾರಿಯಂತೆ ಈ ಬಾರಿ ಕೂಡ ಸಂತೋಷ್ ಲಾಡ್‍ (Santhosh Lad) ಗೆ ಟಿಕೆಟ್ ನೀಡಲಾಗಿದೆ. ಇದು ನಾಗರಾಜ್ ಛಬ್ಬಿ ಹಾಗೂ ಬೆಂಬಲಿತ ಸ್ಥಳೀಯ ಕಾಂಗ್ರೆಸ್ ಜನಪ್ರತಿನಿಧಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇಂದು ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಚಿತ್ರದುರ್ಗದಲ್ಲಿ ರಘು ಆಚಾರ್ (Raghu Achar) ಗೆ ಟಿಕೆಟ್ ಕೈತಪ್ಪಿದ್ದು, ಭಿನ್ನಮತ ಭುಗಿಲೆದ್ದಿದೆ. ಸಿದ್ದರಾಮಯ್ಯನವರೇ ನನಗೆ ಸ್ಪರ್ಧಿಸುವಂತೆ ಹೇಳಿದ್ರು. ಈಗ ತಂದು ಅರ್ಧದಾರಿಯಲ್ಲೇ ಕತ್ತು ಕೊಯ್ದಿದ್ದಾರೆ ಅಂತ ಕೈ ನಾಯಕರ ವಿರುದ್ಧ ರಘು ಆಚಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಸೇರಲು ರಘು ಆಚಾರ್ ಪರೋಕ್ಷ ಸಿದ್ಧತೆ ನಡೆಸ್ತಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಸುಳ್ಳು ಹೇಳ್ತಿದೆ, ಮೋದಿ ಬಳಿ ಹೇಳಿರುವುದು ನನ್ನ ಮನದಾಳದ ಮಾತು: ರಶೀದ್ ಅಹ್ಮದ್ ಖಾದ್ರಿ

ಮಂಡ್ಯದಲ್ಲಿ ಕೀಲಾರ ರಾಧಾಕೃಷ್ಣ (Keelara Radhakrishna) ಗೆ ಟಿಕೆಟ್ ಮಿಸ್ ಆಗಿದೆ. ಹೀಗಾಗಿ ಕೆ.ಕೆ.ರಾಧಾಕೃಷ್ಣ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿ ಮಂಡ್ಯ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಇದೀಗ ರಾಧಾಕೃಷ್ಣ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಈ ಸಂಬಂಧ ಇಂದು ತಮ್ಮ ಬೆಂಬಲಿಗರ ಸಭೆ ಕರೆದು ತಮ್ಮ ನಿರ್ಧಾರ ಪ್ರಕಟ ಮಾಡಲಿದ್ದಾರೆ.

ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಇಬ್ಬರು ಟಿಕೆಟ್ ಆಕಾಂಕ್ಷಿ ಇದ್ರು. ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಇಬ್ಬರೂ ಟಿಕೆಟ್‍ಗೆ ಅರ್ಜಿ ಸಲ್ಲಿಸಿದ್ರು. ಆದರೆ ಕೊನೆಯ ಕಸರತ್ತಿನಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಧಾರವಾಡ ಗ್ರಾಮೀಣ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇದರಿಂದ ಇಸ್ಮಾಯಿಲ್ ಬಂಡಾಯವೆದ್ದಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ನೀಡಲಾಗಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಎಚ್.ಆರ್.ಶ್ರೀನಾಥ್‍ಗೆ ನಿರಾಸೆ ಆಗಿದೆ. ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದು, ಗಂಗಾವತಿಯಲ್ಲಿ ಕಾಂಗ್ರೆಸ್‍ಗೆ ಬಂಡಾಯದ ಭೀತಿ ಎದುರಾಗಿದೆ.

ಒಟ್ಟಿನಲ್ಲಿ ಟಿಕೆಟ್ ಫೈಟ್‍ನಲ್ಲಿ ಸಿದ್ದರಾಮಯ್ಯಗೆ ಮೇಲುಗೈ ಎನ್ನಲಾಗ್ತಿದೆ. ಇದೀಗ ಟಿಕೆಟ್ ವಂಚಿತರು ಬಂಡಾಯವೆದ್ದಿದ್ದು, ಬಿಜೆಪಿ, ಜೆಡಿಎಸ್‍ನತ್ತ ಮುಖ ಮಾಡಿದ್ದಾರೆ.

Share This Article