ಗುರುವನ್ನು ಸೋಲಿಸಿದ ಶಿಷ್ಯ: ಸಿಟಿ ರವಿ ಸೋತಿದ್ದು ಎಲ್ಲಿ?

Public TV
3 Min Read

ಚಿಕ್ಕಮಗಳೂರು: ಯಾವುದೇ ಜಾತಿ ಮತಗಳ ಬಲವೂ ಇಲ್ಲದೇ 19ನೇ ಸುತ್ತಿನವರೆಗೂ ಪೈಪೋಟಿ ಕೊಟ್ಟು ಸೋತಿರುವ ಸಿ.ಟಿ.ರವಿ (C.T.Ravi) ಅವರದ್ದು ಸೋಲೇ ಅಲ್ಲ. ಸಿ.ಟಿ.ರವಿ ಸೋಲಿನಲ್ಲೂ ಗೆಲುವನ್ನು ಕಂಡಿದ್ದಾರೆ ಎನ್ನುತ್ತಿದ್ದಾರೆ ತಾಲೂಕಿನ ಮತದಾರರು.

20 ವರ್ಷಗಳಿಂದ ವಿಧಾನಸೌಧಕ್ಕೆ ಖಾಯಂ ಸದಸ್ಯನಾಗಿದ್ದ ಸಿ.ಟಿ.ರವಿಗೆ ಐದನೇ ಬಾರಿ ವಿಧಾನಸೌಧ ಪ್ರವೇಶಿಸುವ ಕನಸಿಗೆ ಮತದಾರರು ತಣ್ಣೀರೆರಚಿದ್ದಾರೆ. 20 ವರ್ಷಗಳಿಂದ ಹಿಡಿತ ಸಾಧಿಸಿದ್ದ ಅವರಿಗೆ ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟಸಾಧ್ಯ. ಈ ಸೋಲನ್ನು ಸ್ವತಃ ಸಿ.ಟಿ.ರವಿಯವರೇ ಊಹಿಸಿರಲಿಲ್ಲ. ಮತದಾರರೇ ಮೋಸ ಮಾಡಿದ್ದಾರೋ, ನಂಬಿಕಸ್ಥರು ಮೋಸ ಮಾಡಿದ್ದಾರೋ ಅಥವಾ ಬದಲಾವಣೆಯ ಗಾಳಿ ಬೀಸಿದೆಯೋ ಗೊತ್ತಿಲ್ಲ. ಆದರೆ ಎರಡು ದಶಕಗಳಿಂದ ಚಿಕ್ಕಮಗಳೂರಿನಲ್ಲಿ (Chikkamagaluru) ಸೋಲಿಲ್ಲದ ಸರದಾರನಂತೆ ಪಾರುಪಥ್ಯ ಮೆರೆದಿದ್ದ ಅವರು ಮೊದಲ ಸೋಲನ್ನು ಕಂಡಿದ್ದಾರೆ. ಇದನ್ನೂ ಓದಿ: ನನ್ನ ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕಿದ್ರು: ಪರಾಜಿತ ಬಿಜೆಪಿ ಅಭ್ಯರ್ಥಿ ಈಶ್ವರ್ ಸಿಂಗ್ ಸ್ವ ಪಕ್ಷದ ವಿರುದ್ಧ ಕಿಡಿ

ಗುರುವನ್ನು ಸೋಲಿಸಿದ ಶಿಷ್ಯ:
ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ 6 ಜನ ಸ್ಪರ್ಧಿಸಿದ್ದರು. ಅವರೆಲ್ಲಾ 20 ವರ್ಷಗಳಿಂದಲೂ ಸಿ.ಟಿ.ರವಿ ವಿರೋಧಿಗಳೇ. ಅವರ ಎದುರು ಸೋತಿದ್ದರೆ ಬಿಜೆಪಿಯವರಿಗೆ (BJP) ಅಷ್ಟೇನು ನೋವಾಗುತ್ತಿರಲಿಲ್ಲ. ಆದರೆ ಅದೇ 20 ವರ್ಷಗಳಿಂದ ಸ.ಟಿ.ರವಿ ಜೊತೆಗಿದ್ದು, ಅವರ ಆಪ್ತರೆಂದೇ ಗುರುತಿಸಿಕೊಂಡಿದ್ದ ತಮ್ಮಯ್ಯನೆದುರು (H.D.Thammaiah) ಸೋತಿದ್ದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಸಿ.ಟಿ.ರವಿ ಜೊತೆಗಿದ್ದು ರಾಜಕೀಯವನ್ನು ಕರಗತ ಮಾಡಿಕೊಂಡಿದ್ದ ತಮ್ಮಯ್ಯ ನಂತರ ಮಾಡಿದ ಒಳ ರಾಜಕೀಯವೇ ಇಂದು ಬಿಜೆಪಿ ಸೋಲಿಗೆ ಕಾರಣವಾಗಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಇದನ್ನೂ ಓದಿ: ಸಮುದಾಯದ ಐವರಿಗೆ ಸಚಿವ ಸ್ಥಾನ, 1 ಡಿಸಿಎಂ ಕೊಡಿ – ಮುಸ್ಲಿಂ ಮುಖಂಡರ ಆಗ್ರಹ

ಭೋಜೇಗೌಡರ ಲೀಡ್ ರೋಲ್?
ಸಿ.ಟಿ.ರವಿ ಸೋಲಿಗೆ ಜೆಡಿಎಸ್ (JDS) ಎಂಎಲ್ಸಿ ಭೋಜೇಗೌಡರದ್ದು ಲೀಡ್ ರೋಲ್ ಇದೆ ಎನ್ನುತ್ತಾರೆ ಮತದಾರರು. ಯಾಕೆಂದರೆ ತಾನೇ ಜೆಡಿಎಸ್ ಟಿಕೆಟ್ ಕೊಡಿಸಿ ನಿಲ್ಲಿಸಿದ್ದ ತಿಮ್ಮಶೆಟ್ಟಿ ಜೆಡಿಎಸ್ ಅಭ್ಯರ್ಥಿಯಾಗಿ ಅಧಿಕೃತವಾಗಿ ಕಣಕ್ಕಿಳಿದಿದ್ದರೂ ಕೂಡಾ ರಾಜಾರೋಷವಾಗಿ ಜೆಡಿಎಸ್‌ಗೆ ಮತ ಹಾಕಬೇಡಿ, ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಹಳ್ಳಿಹಳ್ಳಿ ಸುತ್ತಿ ಪಂಚಾಯಿತಿ ಕಟ್ಟೆ ಮೇಲೆ ಭಾಷಣ ಮಾಡಿದ್ದರು. ಸಖರಾಯಪಟ್ಟಣ ಹಾಗೂ ಲಕ್ಯಾ ಭಾಗದಲ್ಲಿ ಒಂದಷ್ಟು ಹಿಡಿತವಿರುವ ಭೋಜೇಗೌಡ ಕೂಡಾ ಸಿ.ಟಿ.ರವಿ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರೆ ತಪ್ಪಾಗಲಾರದು. ಇದನ್ನೂ ಓದಿ: ಸೋತಿರೋದಕ್ಕೆ ಕುಂಟು ನೆಪ ಹೇಳೋದು ಸರಿಯಲ್ಲ: ಕೈ ನಾಯಕರಿಗೆ ಸೂರ್ಯ ತಿರುಗೇಟು

ಯಡಿಯೂರಪ್ಪ ಕೈಕೊಟ್ರಾ?
ಇಂತಹದ್ದೊಂದು ಜಿಜ್ಞಾಸೆ ಚಿಕ್ಕಮಗಳೂರು ಮತದಾರರನ್ನು ಕಾಡುತ್ತಲೇ ಇದೆ. ಯಡಿಯೂರಪ್ಪ ಒಮ್ಮೆ ಚಿಕ್ಕಮಗಳೂರಿಗೆ ಭೇಟಿ ನೀಡಿ ಎಂ.ಜಿ.ರಸ್ತೆಯಲ್ಲಿ ಬಂದು ಒಮ್ಮೆ ಕೈಬೀಸಿ ಹೋಗಿದ್ದರೆ ಸಾಕಿತ್ತು. ಇಂದು ಅದೇ 5 ಸಾವಿರ ಮತಗಳ ಅಂತರದಲ್ಲಿ ಸಿ.ಟಿ.ರವಿ ಗೆಲ್ಲುತ್ತಿದ್ದರು ಎನ್ನುವುದು ಮತದಾರರ ಮನದಾಳದ ಮಾತು. ಇದರ ಜೊತೆಗೆ, ಜಿಲ್ಲೆಗೆ ಯಾವುದೇ ಸ್ಟಾರ್ ಕ್ಯಾಂಪೇನರ್ ಕೂಡ ಬರಲಿಲ್ಲ. 4 ಪಕ್ಷ ಹಾಗೂ 3 ಬಲಿಷ್ಠ ಸಮುದಾಯಗಳ ಜೊತೆ ಹೋರಾಡಿ, ಹೊಡೆದಾಡಿದ್ದು ಎಂದರೇ ಅದು ಸಿ.ಟಿ.ರವಿ ಮಾತ್ರ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಜೊತೆಗೆ ಇಡೀ ವ್ಯವಸ್ಥೆ ವಿರುದ್ಧವಾಗಿದ್ದರೂ ಕಾರ್ಯಕರ್ತರ ಜೊತೆ ಏಕಾಂಗಿಯಾಗಿ ಹೋರಾಡಿದ ಸಿ.ಟಿ.ರವಿ ಸೋಲನ್ನು ಅವರ ಅಭಿಮಾನಿಗಳು ಗೆಲುವು ಎಂದೇ ಬಣ್ಣಿಸಿದ್ದಾರೆ. ನಾವು ಸೋತಿದ್ದೇವೆ ಅಷ್ಟೇ, ಸತ್ತಿಲ್ಲ ಎಂದು ಸೋಲನ್ನು ಸವಾಲಾಗಿ ಸ್ವೀಕರಿಸಿದ್ದಾರೆ. ಇದನ್ನೂ ಓದಿ: ಗದ್ದುಗೆ ಏರಿದ ಕೈಗೆ ಅಣ್ಣಾಮಲೈ ಅಭಿನಂದನೆ

ಸಿ.ಟಿ.ರವಿ ಸೋಲಿಗೆ ಪ್ರಮುಖ ಕಾರಣಗಳು :
1. ಲಿಂಗಾಯುತ, ಕುರುಬ, ಮುಸ್ಲಿಂ ಸಮುದಾಯದ ವಿರುದ್ಧದ ಹೇಳಿಕೆಗಳು.
2. ಸಿದ್ದರಾಮಯ್ಯ ವಿರುದ್ಧ ನಿರಂತರ ಹೇಳಿಕೆ ನೀಡುತ್ತಾ ಸಿದ್ದರಾಮಯ್ಯನನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದು.
3. ರಾಷ್ಟ್ರ ರಾಜಕಾರಣಕ್ಕೆ ಹೋಗಿ ಕ್ಷೇತ್ರದಲ್ಲಿ ಒಂದಷ್ಟು ಹಿಡಿತ ಹಾಗೂ ಸಂಪರ್ಕ ಕಳೆದುಕೊಂಡದ್ದು.
4. ಲಿಂಗಾಯುತ ಪ್ರಾಬಲ್ಯದ ಕ್ಷೇತ್ರದಲ್ಲಿ ಬಿಎಸ್‌ವೈ ಕೈಕೊಟ್ಟದ್ದು ಹಾಗೂ ಸ್ಟಾರ್ ಪ್ರಚಾರಕರ ಕೊರತೆ.
5. ವ್ಯವಸ್ಥೆಯ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದು.
6. ಸಿ.ಟಿ.ರವಿಯನ್ನು ಸೋಲಿಸಲೇಬೇಕೆಂದು ಸ್ವಪಕ್ಷೀಯರ ಜೊತೆ ವಿಪಕ್ಷೀಯರು ಕೈಜೋಡಿಸಿದ್ದು.
7. 4 ಬಾರಿ ಶಾಸಕರಾಗಿದ್ದಾರೆ, ಸಾಕು ಎಂದು ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು.
8. ಮೂಡಿಗೆರೆ ಕ್ಷೇತ್ರದಲ್ಲಿ ಎಂ.ಪಿ.ಕುಮಾರಸ್ವಾಮಿಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದರಿಂದ ದಲಿತ ವಿರೋಧಿ ಎಂಬ ಹಣೆಪಟ್ಟಿಯ ಆರೋಪ. ಇದನ್ನೂ ಓದಿ: ಸಿಎಂ ಕುರ್ಚಿ ಫೈಟ್‌; 50-50 ಪ್ಲಾನ್‌ ಡಿಕೆಶಿ ಮುಂದಿಡ್ತಾರಾ ಸಿದ್ದು?

Share This Article