ಚಿಕ್ಕಮಗಳೂರು: ಜೆಡಿಎಸ್ (JDS) ಮುಖಂಡ ಭೋಜೆಗೌಡ (Bhojegowda) ಕಾಂಗ್ರೆಸ್ (Congress) ಪರ ಬಹಿರಂಗ ಪ್ರಚಾರದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರ ಆಪ್ತರಾಗಿರುವ ಎಂಎಲ್‍ಸಿ ಭೋಜೇಗೌಡ ಸಖರಾಯಪಟ್ಟಣ ಸಮೀಪದ ಚಿಕ್ಕಗೌಜ ಗ್ರಾಮದ ದೇವರಕಟ್ಟೆಯ ಮುಂದೆ ಕುಳಿತು ಪ್ರಚಾರ ನಡೆಸಿದ್ದಾರೆ. ಈ ವೇಳೆ ಬಿಜೆಪಿ (BJP) ಶಾಸಕ ಸಿ.ಟಿ.ರವಿಯವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಬೇಕು. ಸಿದ್ದರಾಮಯ್ಯ ಹಾಗೂ ದೇವೇಗೌಡರಿಗೆ ಅವಮಾನ ಮಾಡಿದವರನ್ನು ಸೋಲಿಸಲು ಕಾಂಗ್ರೆಸ್‍ಗೆ ಮತ ಹಾಕಿ ಎಂದು ಕ್ಷೇತ್ರದ ಜನರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹೊಯ್ಸಳರ ನಾಡಲ್ಲಿ ತ್ರಿಕೋನ ಸ್ಪರ್ಧೆ – ಯಾರಾಗ್ತಾರೆ ಸಾಮ್ರಾಟ?
ಸಿ.ಟಿ ರವಿ, ಸಿದ್ದರಾಮಯ್ಯನವರನ್ನು (Siddaramaiah) ಸಿದ್ರಾಮುಲ್ಲಾಖಾನ್ ಎನ್ನುತ್ತಾರೆ. ದೇವೇಗೌಡರನ್ನು ಮುಂದಿನ ಜನ್ಮದಲ್ಲಿ ಮುಸ್ಲಿಮರಾಗಿ ಹುಟ್ಟಿ ಎನ್ನುತ್ತಾರೆ. ಅಲ್ಲದೆ ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಬಗ್ಗೆಯೂ ಮಾತನಾಡುತ್ತಾರೆ. ಅವರಿಗೆ ಮತದಾರರು ಪಾಠ ಕಲಿಸಬೇಕು. ನೀವು ಹಾಲುಮತದ ಕುಟುಂಬದಲ್ಲಿ ಹುಟ್ಟಿದ್ದರೆ, ಸಿದ್ದರಾಮಯ್ಯರಿಗೆ ಅವಮಾನ ಮಾಡಿದವರಿಗೆ ಬುದ್ಧಿ ಕಲಿಸಿ. ಇಲ್ಲದಿದ್ದರೆ ನೀವು ಆ ಕುಟುಂಬದಲ್ಲಿ ಹುಟ್ಟೇ ಇಲ್ಲ ಎಂದರ್ಥ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಹಿಂದೆ ಸಹ ಭೋಜೇಗೌಡರು ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿದ್ದ ವೀಡಿಯೋ ವೈರಲ್ ಆಗಿತ್ತು. ಇದರಿಂದ ಜೆಡಿಎಸ್‍ನಲ್ಲಿ ಗೊಂದಲ ಉಂಟಾಗಿತ್ತು. ಅಲ್ಲದೆ ಈ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಅಸಮಧಾನ ಹೊರಹಾಕಿದ್ದರು. ಇದನ್ನೂ ಓದಿ: ಉಗ್ರರ ಸಂಪರ್ಕಕ್ಕೆ ಮೊಬೈಲ್ ಆಪ್ ಬಳಕೆ – 14 ಅಪ್ಲಿಕೇಷನ್ ನಿಷೇಧಿಸಿದ ಕೇಂದ್ರ

 
			
 
		 
		 
                                
                              
		