ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ, ಅತಿಸೂಕ್ಷ್ಮ ಘೋಷಿಸಬೇಕು – ಮಾಹಿತಿ ಕೋರಿ ಏಜೆಂಟ್‌ಗಳಿಗೆ ಕರಂದ್ಲಾಜೆ ಪತ್ರ

Public TV
2 Min Read

ಬೆಂಗಳೂರು: ಕರ್ನಾಟಕ ಚುನಾವಣೆಗೆ (Karnataka Election) ಇನ್ನೆರಡು ವಾರ ಇರುವಾಗಲೇ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಪಕ್ಷದ ಚುನಾವಣಾ ಏಜೆಂಟ್‍ಗಳಿಗೆ ಬರೆದ ಪತ್ರವೊಂದು ಚರ್ಚೆಗೆ ಗ್ರಾಸವಾಗಿದೆ.

ಯಾವ್ಯಾವ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಎಂದು ಘೋಷಿಸಬೇಕು? ಯಾವ ಭಾಗಗಳಲ್ಲಿ ಕೇಂದ್ರ ಸೇನಾ ಪಡೆಗಳು, ಅರೆಸೇನಾ ತುಕಡಿಗಳನ್ನು ನಿಯೋಜಿಸಬೇಕು? ಯಾವ್ಯಾವ ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ಮತ್ತು ವೀಡಿಯೋ ರೆಕಾರ್ಡಿಂಗ್ ಸೇವೆ ಅಗತ್ಯವಿದೆ ಎಂಬುದನ್ನು ಪಟ್ಟಿ ಮಾಡಿ ಕೂಡಲೇ ಬಿಜೆಪಿ ಐಟಿ ಸೆಲ್‌ಗೆ (BJP IT Cell) ಮೇಲ್ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ.  ಇದನ್ನೂ ಓದಿ: 130 ರಿಂದ 135 ಸೀಟ್ ಗೆದ್ದು ಸರ್ಕಾರ ರಚನೆ ಮಾಡೋದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಬಿಎಸ್‌ವೈ

ಶೋಭಾ ಕರಂದ್ಲಾಜೆ ಬರೆದ ಪತ್ರವನ್ನು ಸಿಎಂ ಸಿದ್ದರಾಮಯ್ಯ (CM Siddaramaiah) ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, ಆಕ್ರೋಶ ಹೊರಹಾಕಿದ್ದಾರೆ. ಚುನಾವಣೆಗಳನ್ನು ಆಯೋಜಿಸುವುದು ಯಾರ ಜವಾಬ್ದಾರಿ? ಚುನಾವಣಾ ಆಯೋಗದ್ದೋ? ಬಿಜೆಪಿಯದ್ದೋ ಎಂದು ಪ್ರಶ್ನಿಸಿದ್ದಾರೆ. ಯಾವ ಮತಗಟ್ಟೆಯಲ್ಲಿ ವೆಬ್ ಕ್ಯಾಸ್ಟಿಂಗ್ ಮಾಡಬೇಕು? ವೀಡಿಯೋ ರೆಕಾರ್ಡಿಂಗ್ ಮಾಡಬೇಕು ಎಂಬುದು ನಿರ್ಧರಿಸುವುದು ಚುನಾವಣಾ ಆಯೋಗ ತಾನೆ? ಚುನಾವಣಾ ಪ್ರಕ್ರಿಯೆಯ ಕೆಲಸಗಳನ್ನು ಮಾಡಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಮ್ಮ ಪರವಾಗಿಲ್ಲದ ಬೂತ್‍ಗಳಲ್ಲಿ ಸೇನಾ ಪಡೆಗಳನ್ನು ನಿಯೋಜಿಸಿ ಮತದಾರರನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ಈ ಕೂಡಲೇ ಶೋಭಾರನ್ನು ವಿಚಾರಣೆಗೆ ಒಳಪಡಿಸಬೇಕು. ಪ್ರಚಾರದಲ್ಲಿ ಪಾಲ್ಗೊಳ್ಳದನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಶೋಭಾ ಕರಂದ್ಲಾಜೆ ಬರೆದ ಪತ್ರವನ್ನು ಸಿಎಂ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮರ್ಥನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪುಂಡಾಟಿಕೆ ತಡೆಯಲು ನಾವು ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಇದರಲ್ಲೇನು ತಪ್ಪು ಎಂದು ಪ್ರಶ್ನೆ ಮಾಡಿದ್ದಾರೆ.


ಶೋಭಾ ಕರಂದ್ಲಾಜೆ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸೂಕ್ಷ್ಮ ಅತಿಸೂಕ್ಷ್ಮ ಬೂತ್‌ಗಳನ್ನು ಆಯೋಗ ಪಟ್ಟಿ ಮಾಡುತ್ತದೆ. ವರುಣಾ, ಕನಕಪುರ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲಿ ಸೂಕ್ಷ್ಮ ಬೂತ್‌ಗಳಿವೆ. ಬಿಜೆಪಿ ಪ್ರಬಲವಲ್ಲದ ಕಡೆ ನಮ್ಮ ಕಾರ್ಯಕರ್ತರಿಗೆ ಕೆಲಸ ಮಾಡಲು ಬಿಡುವುದಿಲ್ಲ. ಹೀಗಾಗಿ ಇಂತಹ ಬೂತ್‌ಗಳ ಮಾಹಿತಿ ಕೊಡಲು ಮತ್ತು ಭದ್ರತೆ ಹೆಚ್ಚಿಸಲು ಮನವಿ ಮಾಡಿದೆ. ಹಿಂದಿನ‌ ಚುನಾವಣೆಯಲ್ಲಿ ಮನವಿ ಮಾಡಿದ್ದೆವು. ಈಗಲೂ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರಿಗೆ ಯಾಕೆ ಭಯ? ಅವರಿಗೆ ಸೋಲಿನ ಭೀತಿ ಶುರುವಾಗಿದ್ಯಾ ಎಂದು ಪ್ರಶ್ನಿಸಿದ್ದಾರೆ.

Share This Article