ನಾನು ಅಭಿಮನ್ಯು ಅಲ್ಲ, ಅರ್ಜುನ : ಸಿ.ಟಿ.ರವಿ

Public TV
1 Min Read

ಚಿಕ್ಕಮಗಳೂರು: ನನ್ನ ಕ್ಷೇತ್ರದಲ್ಲಿ ನನ್ನನ್ನ ಸೋಲಿಸಲು ಡೀಲ್ ಹಾಗೂ ಚಕ್ರವ್ಯೂಹ ರಚಿಸಿದ್ದಾರೆ. ಅದನ್ನು ಭೇದಿಸಲು ನಾನು ಅಭಿಮನ್ಯು ಅಲ್ಲ, ಅರ್ಜುನನಾಗಿದ್ದೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ (CT Ravi) ಟಾಂಗ್‌ ನೀಡಿದರು.

ಜಿಲ್ಲೆಯ ಶೃಂಗೇರಿಯ ಗೌರಿಶಂಕರ್ ಸಭಾಂಗಣದಲ್ಲಿ ಬಿಜೆಪಿ (BJP) ಆಯೋಜಿಸಿದ್ದ ಚುನಾವಣಾ ಪ್ರಚಾರದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಡಿ.ಎನ್.ಜೀವರಾಜ್ ಪರ ಮತಯಾಚನೆ ಮಾಡಿದರು. ಕಾಂಗ್ರೆಸ್ (Congress) ಮತ್ತು ಜೆಡಿಎಸ್ (JDS) ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಚುನಾವಣೆ (Election) ರಾಜಕೀಯ ಕುರುಕ್ಷೇತ್ರವಿದ್ದಂತೆ. ಅದರಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿಕೊಳ್ಳುತ್ತವೆ ಎಂದರು.

ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಗೆದ್ದು, ಅಧಿಕಾರಕ್ಕೆ ಬರಲು ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಗೂಟ ಹೊಡೆದುಕೊಂಡು ಶ್ರಮಿಸಬೇಕು. ಡಬಲ್ ಇಂಜಿನ್ ಸರ್ಕಾರದ ಸಾಧನೆಯೇ ನಮ್ಮ ಗೆಲುವಿಗೆ ಶ್ರೀರಕ್ಷೆ. ನಮ್ಮ ಪಕ್ಷದ ನಿಲುವು ದೇಶ ಮೊದಲು, ನಮ್ಮ ನೀತಿ ಹಿಂದುತ್ವ. ಜಾತಿಗಳ ನಡುವೆ ವಿಷ ಬೀಜವನ್ನು ಬಿತ್ತುವುದು, ವಂಶ ಪಾರಂಪರ್ಯವಾಗಿ ಆಡಳಿತ ನಡೆಸುವುದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಧ್ಯೇಯವಾಗಿದೆ ಎಂದು ಕಾಂಗ್ರೆಸ್-ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಮೆಚ್ಚುವ ಕೆಲಸ ಮಾಡುತ್ತಿದೆ: ರಾಜನಾಥ್ ಸಿಂಗ್

ಸಿದ್ದರಾಮಯ್ಯ ಸರ್ಕಾರವಿದ್ದಾಗ ಯೋಜನೆಗಳು ಜಾತಿ ಆಧಾರಿತವಾಗಿದ್ದವು. ಬಿಜೆಪಿಯವರು ಜಾತಿ ಕೇಳಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ 28 ಹಿಂದೂ ಯುವಕರ ಹತ್ಯೆಯಾಗಿದೆ. ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಹೆಚ್.ಡಿ ಕುಮಾರಸ್ವಾಮಿಯವರನ್ನು ಉದ್ಧಾರ ಮಾಡಿದಂತೆ ಹಾಗೂ ಕಾಂಗ್ರೆಸ್‍ಗೆ ಮತ ಹಾಕಿದಂತೆ ಆಗುತ್ತದೆ. ಅವರು ಅವಕಾಶವಾದಿಗಳು. ಕ್ಷೇತ್ರದ ಒಂದು ವೋಟು, ಒಂದು ಸೀಟನ್ನು ಗೆಲ್ಲಿಸುತ್ತೆ. ಆ ಒಂದು ಸೀಟು ಸರ್ಕಾರವನ್ನು ರಚಿಸುತ್ತದೆ. ಹಾಗಾಗಿ, ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಧರ್ಮ, ಜಾತಿ ವಿಭಜನೆ ಬಿಜೆಪಿಗೆ ಲಾಭ, ಜನರಿಗಲ್ಲ: ಪ್ರಿಯಾಂಕಾ ಗಾಂಧಿ

Share This Article