ಸ್ವರೂಪ್‌ಗೆ ಇಬ್ಬರು ತಾಯಂದಿರು : ಭವಾನಿ ರೇವಣ್ಣ

Public TV
2 Min Read

ಹಾಸನ: ಎಲ್ಲರಿಗೂ ಒಬ್ಬರು ತಾಯಿ ಇರ್ತಾರೆ, ಆದರೆ ಸ್ವರೂಪ್‌ಗೆ (Swaroop) ಇಬ್ಬರು ತಾಯಂದಿರಿದ್ದಾರೆ ಎಂದು ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ (Bhavani Revanna) ತಿಳಿಸಿದರು.

ಬುಧವಾರ ಪತಿ ರೇವಣ್ಣ, ಜೆಡಿಎಸ್ (JDS) ಅಭ್ಯರ್ಥಿ ಹೆಚ್.ಪಿ.ಸ್ವರೂಪ್ ಹಾಗೂ ಸಾವಿರಾರು ಮುಖಂಡರೊಂದಿಗೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನಂತರ ನಡೆದ ಮೆರವಣಿಗೆಯಲ್ಲಿ ಅವರು ಮಾತನಾಡಿದರು. ಹಾಸನ (Hassan) ಅಭ್ಯರ್ಥಿ ಯಾರು ಅಂತ ಗೊಂದಲ ಇತ್ತು. ನಾನು ಕೂಡ ಆಕಾಂಕ್ಷಿ ಆಗಿದ್ದೆ, ನನ್ನ ಜೊತೆ ನೀವು ನಿಂತಿದ್ದು ನಿಜ. ಆದರೆ ದಿನ ಕಳೆದಂತೆ ದೇವೇಗೌಡರ ಆದೇಶ ಧಿಕ್ಕರಿಸಲು ಆಗಲಿಲ್ಲ. ಹಾಗಾಗಿ ನಾನೇ ತೀರ್ಮಾನ ಮಾಡಿ ಕುಮಾರಣ್ಣ ಅವರಿಗೆ ಸ್ಚರೂಪ್‌ನನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿ ಎಂದೆ. ಈಗ ಸ್ವರೂಪ್‌ಗೆ ಇಬ್ಬರು ತಾಯಂದಿರಿದ್ದಾರೆ. ಲಲಿತಕ್ಕ ಹೆತ್ತವಳು. ಈ ಭಾರ ಹೊತ್ತುಕೊಂಡವಳು ನಾನು. ಈ ವಿಚಾರದಲ್ಲಿ ಸ್ವರೂಪ್ ಅದೃಷ್ಟವಂತ ಎಂದು ಭವಾನಿ ಬಣ್ಣಿಸಿದರು.

ಈ ವೇಳೆ ಶಾಸಕ ಪ್ರೀತಂಗೌಡ ವಿರುದ್ಧ ಅವರು, ಮಹಿಳೆಯರ ಬಗ್ಗೆ ಗೌರವ ಇಲ್ಲದೆ ಮಾತಾಡಿರುವುದು ಅವರಿಗೆ ಗೌರವ ತರುತ್ತಾ? ದೇವೇಗೌಡರು ಇಡೀ ರಾಜ್ಯಕ್ಕೆ ತಂದೆ ಸಮಾನರು. ಅಂತಹವರಿಗೆ ಅವಮಾನ ಮಾಡಿ ಮಾತಾಡ್ತಾರೆ. ರೇವಣ್ಣ ಅವರು ಶಾಸಕರಾಗಿ, ಸಚಿವರಾದವರು. ಅವರ ಬಗ್ಗೆನೂ ಮಾತಾಡ್ತಾರೆ ಎಂದು ಆಕ್ರೋಶ ಹೊರಹಾಕಿದರು.

ಮೇ.10 ರಂದು ಚುನಾವಣೆ ಇದೆ. ಮೇ 18ಕ್ಕೆ ದೇವೇಗೌಡರ ಹುಟ್ಟುಹಬ್ಬ ಇದೆ. ದೇವೇಗೌಡರ ಪಾದದಡಿಗೆ ಈ ಗೆಲುವು ಕೊಡುತ್ತೇವೆ. ಜಿಲ್ಲೆಯಲ್ಲಿ ಏಳಕ್ಕೆ ಏಳೂ ಕ್ಷೇತ್ರ ಗೆಲ್ಲಿಸ್ತೀವಿ ಅಂತ ಮಾತು ಕೊಟ್ಟಿದ್ದೇವೆ. ಜೆಡಿಎಸ್ ಅಧಿಕಾರಕ್ಕೆ ಬರಬೇಕು ಎಂದರು. ಇದನ್ನೂ ಓದಿ: ಸೋಮಣ್ಣ ವೈರಲ್ ಆಡಿಯೋ – ಚುನಾವಣಾ ಆಯೋಗದಿಂದ ತನಿಖೆ

ಬಿಜೆಪಿ ಶಾಸಕರಿಂದ ನೋವು ತಿಂದಿರುವ ಕುಟುಂಬ ಸಾಕಷ್ಟಿವೆ. ಪ್ರತಿಯೊಬ್ಬರೂ ಕೂಡ ಚಾಲೆಂಜ್ ಆಗಿ ಸ್ವೀಕಾರ ಮಾಡಬೇಕು. ನಮ್ಮ ಕೆಲಸ ಇದೇ ರೀತಿಯಲ್ಲಿ ಇರಬೇಕು, ಮುನ್ನುಗ್ಗುತ್ತಿರಬೇಕು. ಬಿಜೆಪಿ ಸೋಲಿಸಬೇಕು, ಇಲ್ಲಿನ ಶಾಸಕರೇ ಹೇಳುತ್ತಿರುವಂತೆ ಅವರನ್ನು ಹಾಸನ ಬಿಟ್ಟು ಓಡಿಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಶೆಟ್ಟರ್ ಅರ್ಥ ಮಾಡಿಕೊಳ್ಳಲು ಆಗಲಿಲ್ಲ, ಫೇಲ್ ಆದೆ: ಜೋಶಿ

Share This Article