25 ಲಕ್ಷ ವಂಚನೆ, ಸುಧಾಕರ್‌ ಹೆಸರು ಬರೆದಿಟ್ಟು ಚಾಲಕ ಸೂಸೈಡ್‌ – ಡೆತ್‌ನೋಟ್‌ನಲ್ಲಿ ಏನಿದೆ?

Public TV
2 Min Read

ಚಿಕ್ಕಬಳ್ಳಾಪುರ: ಜಿಲ್ಲಾ ಪಂಚಾಯತಿ ಸಿಎಇ ಅವರ ಕಾರು ಚಾಲಕ ಬಾಬು ಆತ್ಮಹತ್ಯೆ (Suicide) ಮಾಡಿಕೊಳ್ಳುವ ಮುನ್ನ ಡೆತ್‌ನೋಟ್‌ (Death Note) ಅನ್ನು ಮಹಿಳಾ ಸಿಬ್ಬಂದಿಗೆ ಕಳುಹಿಸಿದ್ದರು.

ಜಿಲ್ಲಾ ಪಂಚಾಯತ್‌ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕ ಬಾಬು ಜಿಲ್ಲಾಡಳಿತ ಭವನದ ಆವರಣದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್‌ ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್‌ಪಿ ಕುಶಾಲ್ ಚೌಕ್ಸಿ ಸೇರಿದಂತೆ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕನ ಸರ್ಕಾರಿ ಕಾರಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನನ್ನ ಸಾವಿಗೆ ಡಾ ಕೆ ಸುಧಾಕರ್ (K Sudhakar) ಕಾರಣ ಎಂದು ಉಲ್ಲೇಖಿಸಿದ್ದಾರೆ.

ಘಟನೆ ಸಂಬಂಧ ತನಿಖೆಗಿಳಿದ ಪೊಲೀಸರು ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದು ಇತ್ತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ನಾಗೇಶ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಇದನ್ನೂ ಓದಿ: ನಾಳೆ ಬೆಂಗ್ಳೂರಿಗೆ ರಾಹುಲ್ ಗಾಂಧಿ ಹಲವೆಡೆ ಸಂಚಾರ ಬಂದ್, ಟ್ರಾಫಿಕ್ ತಪ್ಪಿಸೋಕೆ ಪರ್ಯಾಯ ವ್ಯವಸ್ಥೆ

ಡೆತ್‌ ನೋಟ್‌ನಲ್ಲಿ ಏನಿದೆ?
ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ. ಮೊದಲ ಪುಟದ ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ ಕೆ ಸುಧಾಕರ್, ನಾಗೇಶ್, ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್‌ಡಿ ಮಂಜುನಾಥ್ ಹೆಸರನ್ನ ಬರೆಯಲಾಗಿದೆ. ಸುಧಾಕರ್‌ಗೆ ಹೇಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ನಾಗೇಶ್ 25 ಲಕ್ಷ ರೂ. ಹಣ ಪಡೆದು ಪಡೆದುಕೊಂಡಿದ್ದಾನೆ. ಆದರೆ ನನಗೆ ಕೆಲಸವೂ ಸಿಕ್ಕಿಲ್ಲ. ಹಣವು ಸಿಕ್ಕಿಲ್ಲ ಎಂದು ಬರೆಯಲಾಗಿದೆ.

ಈ ಪತ್ರದ ಫೋಟೋವನ್ನು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗೆ ಕಳುಹಿಸಿದ್ದಾರೆ. ಈ ಡೆತ್‌ ನೋಟ್‌ ನೋಡಿ ಅವರು ಕಚೇರಿ ಬಳಿ ಆಗಮಿಸುವಷ್ಟರಲ್ಲೇ ಬಾಬು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಸಂಬಂಧಿಕರ ಗೋಳಾಟ
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಪತ್ನಿ ಶಿಲ್ಪಾ ಹಾಗೂ ಸಹೋದರ ಲೋಕೇಶ್ ಸೇರಿದಂತೆ ತಾಯಿ ಕಾಳಮ್ಮ ಆಕ್ರಂದನ ಮುಗಿಲುಮುಟ್ಟಿದೆ. ಸಭೆಯಿದೆ ಎಂದು ಹೇಳಿ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟ್ಟಿದ್ದರು. ಆದರೆ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ತಿಳಿಸಿದರು. ಅಣ್ಣ ಸರ್ಕಾರಿ ಕೆಲಸಕ್ಕೆ ಹಣ ನೀಡಿದ್ದು ಹಾಗೂ ಡೆತ್ ನೋಟ್‌ನಲ್ಲಿ ಉಲ್ಲೇಖವಾದ ವಿಚಾರದ ಬಗ್ಗೆ ನಮಗೇನು ಸರಿಯಾಗಿ ತಿಳಿದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪ್ರತಿಭಟನೆ
ಘಟನೆ ನಡೆದ ಬೆನ್ನಲ್ಲೇ ಸಕ್ರೀಯವಾಗಿರುವ ಕಾಂಗ್ರೆಸ್ ಮುಖಂಡರು ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಮಾಯಕನ ಸಾವಿಗೆ ಕಾರಣರಾವಾಗಿರುವ ಸಂಸದ ಸುಧಾಕರ್ ಹಾಗೂ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿರುವ ನಾಗೇಶ್ ಹಾಗೂ ಮಂಜುನಾಥ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Share This Article