ಇಂದಿನಿಂದಲೇ ಕರ್ನಾಟಕದಲ್ಲಿ ಆಸ್ತಿ ಖರೀದಿ ಶುಲ್ಕ ದುಪ್ಪಟ್ಟು

Public TV
2 Min Read

ಬೆಂಗಳೂರು: ಬಸ್ಸು, ವಿದ್ಯುತ್‌, ನೀರು, ಹಾಲು ಮೆಟ್ರೋ ದರ ಸೇರಿದಂತೆ ವಿವಿಧ ದರ ಹೆಚ್ಚಳ ಮಾಡಿದ ಸಿಎಂ ಸಿದ್ದರಾಮಯ್ಯ (CM Siddaramaiah) ಸರ್ಕಾರ ಮತ್ತೆ ಬಿಗ್ ಶಾಕ್ ನೀಡಿದ್ದು ಇಂದಿನಿಂದಲೇ ಆಸ್ತಿ ಖರೀದಿ ನೋಂದಣಿ ಶುಲ್ಕ (Property Registration) ದುಪ್ಪಟ್ಟಾಗಿದೆ.

ಆಸ್ತಿ ಖರೀದಿ ನೋಂದಣಿ ಶುಲ್ಕವನ್ನು ಹಿಂದಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಏರಿಕೆ ಮಾಡಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶ ಹೊರಡಿಸಿದೆ. ನೋಂದಣಿ ಶುಲ್ಕ ಶೇ.1 ರಿಂದ ಶೇ.2 ರಷ್ಟು ಏರಿಕೆಯಾಗಿದೆ.

ಮಾರ್ಗಸೂಚಿ ದರದ ಪ್ರಮಾಣಕ್ಕೆ ಅನುಗುಣವಾಗಿ ನೋಂದಣಿ ಶುಲ್ಕ ನಿಗದಿ ಮಾಡಲಾಗಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಗಟ್ಟಿಯಾದ ಬ್ಲಾಂಕೆಟ್‌, ದಿಂಬು, ನೈಟ್ ಡ್ರೆಸ್ ಬೇಕು ಜೈಲಲ್ಲಿರೋ ದರ್ಶನ್ ಹೊಸ ಬೇಡಿಕೆ

ರಾಜ್ಯದಲ್ಲಿ ಈವರೆಗೂ ನಿವೇಶನ, ಭೂಮಿ, ಫ್ಲ್ಯಾಟ್,​ ಮನೆ ಸೇರಿದಂತೆ ಸ್ಥಿರಾಸ್ತಿ ಖರೀದಿ ವೇಳೆ ಶೇ.1ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6ರಷ್ಟು ಮುದ್ರಾಂಕ ಶುಲ್ಕ ಸೇರಿ ಶೇ.6.6ರಷ್ಟು ಶುಲ್ಕ ಇತ್ತು. ಆದರೆ ಈಗ ಏರಿಕೆಯಿಂದ ಒಟ್ಟು ಶೇ.7.6ರಷ್ಟು ಶುಲ್ಕ ಕಟ್ಟಬೇಕಾಗುತ್ತದೆ.

ಕರ್ನಾಟಕ (Karnataka) ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವ ದರಗಳಿಗಿಂತ ಪ್ರಸ್ತುತ ಕಡಿಮೆ ಶುಲ್ಕ ಇದೆ. ಸದ್ಯ ಅದನ್ನು ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ (Mullai Mugilan) ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್ ಸೇರಿ ಕರ್ನಾಟಕ ರಾಜ್ಯವು ಶೇ.6.6ರಷ್ಟು ವಿಧಿಸುತ್ತಿತ್ತು. ಇದೇ ಅವಧಿಯಲ್ಲಿ ಈ ಶುಲ್ಕವು ತಮಿಳುನಾಡು ರಾಜ್ಯದಲ್ಲಿ ಶೇ.9, ಕೇರಳ ಶೇ.10, ಆಂಧ್ರಪ್ರದೇಶ ಶೇ.7.5, ತೆಲಂಗಾಣ ರಾಜ್ಯಗಳು ಶೇ.7.5ರಷ್ಟು ಶುಲ್ಕ ಅನುಸರಿಸುತ್ತಿವೆ. ದಸ್ತಾವೇಜುಗಳ ಮೇಲಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಿಕೊಳ್ಳಲು, ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಯನ್ನು ನೀಡಲು ರಾಜ್ಯ ಸರ್ಕಾರವು 2025ರ ಆ.31ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇ.1 ರಿಂದ ಶೇ.2ರಷ್ಟು ಪರಿಷ್ಕರಿಸಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.

Share This Article