ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್ – ಕೋರ್ಟಿನಲ್ಲಿ ಸಿಬಲ್ ವ್ಯಂಗ್ಯ

Public TV
3 Min Read

ನವದೆಹಲಿ: “ಈಗ ಮುಂಬೈ ಹಾರ್ಟ್ ಅಟ್ಯಾಕ್ ಕೇಸ್” ಎಂದು ಹೇಳುವ ಮೂಲಕ ಸಿಬಲ್ ಕೋರ್ಟ್ ಹಾಲ್‍ನಲ್ಲಿ ವ್ಯಂಗ್ಯವಾಗಿ ವಾದವನ್ನು ಮಂಡಿಸಿದ ಪ್ರಸಂಗ ಇಂದು ಸುಪ್ರೀಂ ಕೋರ್ಟಿನಲ್ಲಿ ನಡೆಯಿತು.

ಶ್ರೀಮಂತ ಪಾಟೀಲ್ ಬಗ್ಗೆ ವಾದ ಆರಂಭಿಸಿದ ಅವರು, ರಾತ್ರೋರಾತ್ರಿ ಶ್ರೀಮಂತ ಪಾಟೀಲ್ ಮುಂಬೈಗೆ ತೆರಳಿದ್ದರು. ಹಾರ್ಟ್ ಅಟ್ಯಾಕ್ ಆಗಿದೆ ಚಿಕಿತ್ಸೆಗೆ ತೆರಳಿದ್ದರು ಅಂತ ಹೇಳಿದ್ದಾರೆ. ಕೆಲವು ದಾಖಲೆ ಮತ್ತು ಫೋಟೋಗಳನ್ನು ಕಳುಹಿಸಿದ್ದರು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ವಿಧಾನಸಭೆಗೆ ಅನರ್ಹರಾದವರು ಲೋಕಸಭೆಗೆ ಸ್ಪರ್ಧೆ ಮಾಡಬಹುದೇ – ಸಿಬಲ್‍ಗೆ ಸುಪ್ರೀಂ ಪ್ರಶ್ನೆ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶ್ರೀಮಂತ ಪಾಟೀಲ್ ಪರ ವಕೀಲ ವಿ.ಗಿರಿ, ಆಸ್ಪತ್ರೆಯಲ್ಲಿ ಯಾರನ್ನೂ ಭೇಟಿಗೆ ಬಿಟ್ಟಿಲ್ಲ ಎಂದು ವಾದ ಮಂಡಿಸಿದರು. ಆಗ ಸಿಬಲ್ ಅವರು, ಶ್ರೀಮಂತ ಪಾಟೀಲ್ ಹಾರ್ಟ್ ಅಟ್ಯಾಕ್‍ನಿಂದ ಚೇತರಿಸಿಕೊಂಡಿದ್ದು ಸಂಜೀವಿನಿಯಿಂದ ಎಂದು ತಮಾಷೆಯಾಗಿ ವಾದಿಸಿದರು.

ವಾದ ಮುಂದುವರಿಸಿದ ಕಪಿಲ್ ಸಿಬಲ್ ಅವರು, ಅಲ್ಲಿ ಯಾವ ವೈದ್ಯರೂ ಇರಲಿಲ್ಲ. ವೈದ್ಯರ ಹೆಸರಿಲ್ಲ, ಅವರ ಸಹಿ ಇಲ್ಲ. ಸ್ಪೀಕರ್ ಇವರ ವಿಷಯದಲ್ಲಿ ಏನು ಮಾಡಬೇಕಿತ್ತು ಹೇಳಿ ಎಂದು ನ್ಯಾಯಮೂರ್ತಿಗಳನ್ನು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕಾಂಗ್ರೆಸ್ ಜೊತೆ ಕೆಪಿಜೆಪಿ ವಿಲೀನವಾಗಿದ್ದಕ್ಕೆ ಶಂಕರ್ ಮೇಲೆ ಕ್ರಮ – ಸಿಬಲ್ ವಾದ ಹೀಗಿತ್ತು

ಅನರ್ಹ ಶಾಸಕರಾದ ವಿಶ್ವನಾಥ್, ಗೋಪಾಲಯ್ಯ ಮತ್ತು ನಾರಾಯಣ ಗೌಡರ ಅವರು ರಾಜೀನಾಮೆ ನೀಡಲು ಸಕಾರಣಗಳೇ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ. ಜುಲೈ 7ರಂದು ಬೇರೆಯವರೊಂದಿಗೆ ರಾಜ್ಯಪಾಲರ ಬಳಿ ಇದ್ದರು. ಇವರು ಕೂಡ ಮುಂಬೈ ಪ್ರವಾಸ ಕೈಗೊಂಡಿದ್ದರು ಎಂದು ಕಪಿಲ್ ಸಿಬಲ್ ಕೋರ್ಟಿಗೆ ಮಾಹಿತಿ ನೀಡಿದರು.

ಅನರ್ಹರಿಗೆ ಚುನಾವಣೆಯಲ್ಲಿ ನಿಲ್ಲಲು ಅವಕಾಶ ಮಾಡಿಕೊಡಬಾರದು. ಇವರಿಗೆ ಅವಕಾಶ ಕೊಟ್ಟರೆ ಏನು ಬೇಕಾದರೂ ಮಾಡಿ ಜೈಸಿಕೊಳ್ಳಬಹುದು ಎಂಬ ಸಂದೇಶ ಹೋಗಲಿದೆ. ಇದು ಸಂಪೂರ್ಣ ಸಂವಿಧಾನ ಬಾಹಿರವಾದ ಕ್ರಮವಾಗಲಿದೆ ಎಂದು ಸಿಬಲ್ ವಾದವನ್ನು ಅಂತ್ಯಗೊಳಿಸಿದರು.

ಸ್ಪೀಕರ್ ಪರ ವಕೀಲರ ವಾದ:
ಸ್ಪೀಕರ್ ಕಾಗೇರಿ ಪರ ವಕೀಲ ತುಷಾರ್ ಮೆಹ್ತಾ ವಾದ ಮಂಡನೆ ಆರಂಭಿಸಿ, ಕಾಂಗ್ರೆಸ್ ಪರ ವಕೀಲರು ರಾಜೀನಾಮೆ ಕೊಟ್ಟ ದಿನಾಂಕಗಳನ್ನು ಮತ್ತೆ ಹೇಳುತ್ತಿದ್ದಾರೆ. ಸುಪ್ರೀಂಕೋರ್ಟ್ ಸೂಚನೆ ಬಳಿಕ ಮತ್ತೊಮ್ಮೆ ರಾಜೀನಾಮೆ ನೀಡಿದ್ದರು. ಯಾವುದೇ ಅಧಿಕೃತ ಆದೇಶ ಸ್ಪೀಕರ್ ಕಚೇರಿಯಲ್ಲಿಲ್ಲ. ಕೆಪಿಜೆಪಿ ವಿಲೀನದ ಆದೇಶದ ಪ್ರತಿ ಇಲ್ಲ ಎಂದರು.

ಚುನಾವಣಾ ಆಯೋಗ:
ಚುನಾವಣಾ ಆಯೋಗ ಪರ ವಾದ ಮಂಡಿಸಿದ ರಾಕೇಶ್ ದ್ವಿವೇದಿ, ಖಾಲಿಯಾಗಿರುವ ಕ್ಷೇತ್ರಕ್ಕೆ ಚುನಾವಣಾ ನಡೆಸುವುದು ನಮ್ಮ ಕೆಲಸ. ಅದಕ್ಕಾಗಿ ಚುನಾವಣೆ ಘೋಷಣೆ ಮಾಡಿದ್ದೇವೆ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಇಲ್ಲಿ ರಾಜೀನಾಮೆ ತಿರಸ್ಕರಿಸಿ ಅನರ್ಹ ಮಾಡಿದ್ದಾರೆ. ಏನಾದ್ರೂ ಆಗಲಿ ಆ ಕ್ಷೇತ್ರ ಖಾಲಿ ಉಳಿಯಲಿದೆ ಎಂದು ತಿಳಿಸಿದರು.

ಈಗ ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಠಿಯಾಗಲಿದೆ. ಚುನಾವಣೆ ನಿಲ್ಲಿಸಿದರೆ ಜನಪ್ರತಿನಿಧಿ ಇಲ್ಲದಂತಾಗುತ್ತದೆ. ಹಾಗೇ ಚುನಾವಣೆ ಆದರೆ ಬೇರೆ ಜನಪ್ರತಿನಿಧಿ ಆಯ್ಕೆ ಆಗುತ್ತಾರೆ. ಪ್ರಕರಣ ಇತ್ಯರ್ಥ ಆದ ಬಳಿಕ ಶಾಸಕರು ಅರ್ಹರಾದರೆ ಸಾಂವಿಧಾನಿಕ ಬಿಕ್ಕಟ್ಟು ಆರಂಭ ಆಗಲಿದೆ ಎಂದು ವಾದಿಸಿದರು.

ರಾಕೇಶ್ ದ್ವಿವೇದಿ ಅವರ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಸಂಜಯ್ ಖನ್ನಾ ಅವರು, ಹಾಗಾಂತ ಚುನಾವಣೆ ಅಧಿಸೂಚನೆಗೆ ತಡೆ ನೀಡಲು ಸಾಧ್ಯವಿಲ್ಲ. ಪ್ರಕರಣವನ್ನು ಮೂರು ನಾಲ್ಕು ದಿನ ವಿಚಾರಣೆ ನಡೆಸಬೇಕಿದೆ. ತಾರ್ಕಿಕ ಅಂತ್ಯ ಕಾಣಬೇಕು. ಹಲವು ವಿಷಯಗಳ ಬಗ್ಗೆ ಇನ್ನು ವಿಚಾರಣೆ ನಡೆಯಬೇಕಿದೆ. ಚುನಾವಣೆ ಮುಂದೆ ಹಾಕುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಕೇಸ್ ಮುಗಿದ ಮೇಲೆ ಚುನಾವಣೆ ನಡೆಯಬಹುದು ಎಂದು ನ್ಯಾಯಪೀಠವು ಅಭಿಪ್ರಾಯ ವ್ಯಕ್ತಪಡಿಸಿತು. ಆಗ ನ್ಯಾ. ರಮಣ ಅವರು, ಬೇರೆ ಯಾವುದಾದರು ವಿಚಾರಣೆ ಮುಂದುವರಿಯಲಿ ಎಂದರು. ಈ ವೇಳೆ ಕಾಂಗ್ರೆಸ್, ಪ್ರಕರಣವು ಸಂವಿಧಾನಿಕ ಪೀಠಕ್ಕೆ ಹೋಗಲಿ ಎಂದು ಕೇಳಿಕೊಂಡಿತು. ಇದಕ್ಕೆ ಉತ್ತರ ನೀಡಿದ ನ್ಯಾ.ರಮಣ ಅವರು, ಅವಶ್ಯಕತೆ ಬಂದರೆ ಬೇರೆ ಪೀಠಕ್ಕೆ ವರ್ಗಾ ಮಾಡುತ್ತೇವೆ. ಮುಂದಿನ ತಿಂಗಳ 22ರ ಬಳಿಕ ವಿಚಾರಣೆ ನಡೆಯಲಿದೆ ಎಂದು ವಿಚಾರಣೆಯನ್ನು ಮುಂದೂಡಿದರು.

Share This Article
Leave a Comment

Leave a Reply

Your email address will not be published. Required fields are marked *