ಕೊರೊನಾಗೆ ರಾಜ್ಯದ 9 ಮಂದಿ ಬಲಿ: ಸೋಂಕು ಬಂದಿದ್ದು ಹೇಗೆ? ಇಲ್ಲಿದೆ ಪೂರ್ಣ ವಿವರ

Public TV
4 Min Read

ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ಗೆ ರಾಜ್ಯದಲ್ಲಿ ಈವರೆಗೂ 9 ಜನರನ್ನು ಬಲಿ ಪಡೆದುಕೊಂಡಿದೆ. ಮೃತರಲ್ಲಿ ಹೆಚ್ಚಿನವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದವರೇ ಆಗಿದ್ದರು. ಹೀಗಾಗಿ ಇಲ್ಲಿ ಮೃತ ವ್ಯಕ್ತಿಗಳ ವಿವರವನ್ನು ನೀಡಲಾಗಿದೆ.

ಮೃತಪಟ್ಟ ರೋಗಿಗಳು:
1. ರೋಗಿ 6:
ಕೊರೊನಾ ವೈರಸ್‍ಗೆ ದೇಶದ ಮೊದಲ ಸಾವು ಕಲಬುರಗಿಯಲ್ಲಿ ಆಗಿತ್ತು. ಮಾರ್ಚ್ 11ರಂದು ಮೃತಪಟ್ಟಿದ್ದ 76 ವರ್ಷದ ವೃದ್ಧನಿಗೆ ಕೊರೊನಾ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ವೈದ್ಯರು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದಾಗ ಪಾಸಿಟಿವ್ ಬಂದಿತ್ತು. ಇದರಿಂದಾಗಿ ವೃದ್ಧನ ಜೊತೆಗೆ ಸಂಪರ್ಕ ಹೊಂದಿದ್ದವರನ್ನು ಪ್ರತ್ಯೇಕವಾಗಿರಿ ಚಿಕಿತ್ಸೆ ಕೊಡಲಾಗಿದೆ. ವೃದ್ಧ ಫೆಬ್ರವರಿ 29ರಂದು ಸೌದಿಯಿಂದ ವಾಪಸ್ ಆಗಿದ್ದರು.

2. ರೋಗಿ 53:
ಮೆಕ್ಕಾದಿಂದ ಹಿಂತಿರುಗಿದ್ದ ಗೌರಿಬಿದನೂರಿನ 75 ವರ್ಷದ ವೃದ್ಧೆಯೊರೊಬ್ಬರು ಮಾರ್ಚ್ 24ರಂದು ರಾತ್ರಿ ಒಂದು ಗಂಟೆಗೆ ಬೌರಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರು ಮಧುಮೇಹ, ಎದೆನೋವಿನಿಂದ ಬಳಲುತ್ತಿದ್ದರು.

3. ರೋಗಿ 60:
ದೆಹಲಿಯಲ್ಲಿ ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದಿದ್ದ ತುಮಕೂರು ಜಿಲ್ಲೆ ಶಿರಾದ 60 ವರ್ಷದ ವೃದ್ಧ ಕೊರೊನಾ ಸೋಂಕಿನಿಂದ ಮಾರ್ಚ್ 27ರಂದು ಮೃತಪಟ್ಟಿದ್ದರು. ಅವರು ಒಟ್ಟು 13 ಜನರ ಸ್ನೇಹಿತರೊಂದಿಗೆ ದೆಹಲಿಗೆ ತೆರಳಿದ್ದರು. ಇವರಲ್ಲಿ ಒಬ್ಬರು ತಿಪಟೂರು, ಒಬ್ಬರು ಮಂಡ್ಯದ ನಾಗಮಂಗಲ. ಮೃತ ವೃದ್ಧ ಶಿರಾ ನಗರ, ಇನ್ನುಳಿದಂತೆ 10 ಜನರು ತುಮಕೂರು ನಗರದವರು ಎನ್ನಲಾಗಿತ್ತು. ಅಲ್ಲದೇ ಮೃತ ವೃದ್ಧನ ಮೂವರು ಪತ್ನಿಯರು, 9 ಜನ ಮಕ್ಕಳು, 5 ಜನ ಮೊಮ್ಮಕ್ಕಳು, ಸೊಸೆ, ಮತ್ತೊಬ್ಬ ಸ್ನೇಹಿತ ಸೇರಿದಂತೆ ಒಟ್ಟು 33 ಜನರ ನಡುವೆ ನೇರಸಂಪರ್ಕ ಇಟ್ಟುಕೊಂಡಿದ್ದರು.

4. ರೋಗಿ 125:
ಬಾಗಲಕೋಟೆ ಜಿಲ್ಲೆಯಲ್ಲಿ ಮಾರ್ಚ್ 3ರಂದು 75 ವರ್ಷದ ವೃದ್ಧ ಮಾರ್ಚ್ 3ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಕಿರಾಣಿ ಹಾಗೂ ಅಡುಗೆ ಎಣ್ಣೆ ವರ್ತಕರಾಗಿದ್ದ ವೃದ್ಧ ಮಾರ್ಚ್ 31ರಂದು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ವೃದ್ಧ ಯಾವುದೇ ವಿದೇಶ, ರಾಜ್ಯ, ಪರ ಜಿಲ್ಲೆಗೂ ಪ್ರವಾಸ ಮಾಡಿರಲಿಲ್ಲ. ವೃದ್ಧನ ಮಗ ಮತ್ತು ಮಗಳು ಮಾರ್ಚ್ ಎರಡನೇ ವಾರದಲ್ಲಿ ಬೆಂಗಳೂರಿನಿಂದ ಬಾಗಲಕೋಟೆಗೆ ಬಂದಿದ್ದರು. ಮೃತನ 58 ವರ್ಷದ ಸಹೋದರ ಕಲಬುರಗಿಗೆ ಹೋಗಿದ್ದು ಆತನಿಗೆ ಪಾಸಿಟಿವ್ ಬಂದಿದೆ. ಒಟ್ಟು ಈಗ ಈ ಸಂಪರ್ಕದಿಂದ ಮೃತನು ಸೇರಿದಂತೆ 10 ಮಂದಿಗೆ ಕೊರೊನಾ ಬಂದಿದೆ.

5. ರೋಗಿ 166:
ಗದಗನ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ 80 ವರ್ಷದ ವೃದ್ಧೆ ಏಪ್ರಿಲ್ 4ರಂದು ಸಾವನ್ನಪ್ಪಿದ್ದರು. ವೃದ್ಧೆಗೆ ಏಪ್ರಿಲ್ 7ರಂದು ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅಜ್ಜಿ ಸೋಂಕು ಹೇಗೆ ಬಂದಿದೆ ಎನ್ನುವುದು ತಿಳಿದು ಬಂದಿಲ್ಲ. ಜಿಲ್ಲಾಡಳಿತ ಈಗಲೂ ಮೂಲವನ್ನು ಪತ್ತೆ ಮಾಡುವ ಕಾರ್ಯ ಮಾಡುತ್ತಿದೆ.

6. ರೋಗಿ 177:
ಕಲಬುರಗಿಯ 65 ವರ್ಷದ ವ್ಯಕ್ತಿ ಏಪ್ರಿಲ್ 9ರಂದು ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇದು ಎರಡನೇ ಸಾವು ಆಗಿತ್ತು. ಯಾವುದೇ ಸಂಪರ್ಕ ಇಲ್ಲದ ಈ ವ್ಯಕ್ತಿಗೆ ಕೊರೊನಾ ಬಂದಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿತ್ತು. ಕುಟುಂಬದವರ ವಿಚಾರಣೆಯ ಸಂದರ್ಭದಲ್ಲಿ ಪುಣೆಯಲ್ಲಿದ್ದ ಸಹೋದರಿಯ ಮನೆಗೆ ತೆರಳಿದ್ದರು ಎಂದು ತಿಳಿಸಿದ್ದರು. ಆದರೆ ವ್ಯಕ್ತಿಯ ಫೋನ್ ನಂಬರ್ ಟ್ರ್ಯಾಕ್‍ಗೆ ಮಾಡಿದಾಗ ಪುಣೆಗೆ ತೆರಳದ ವಿಚಾರ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಕುಟುಂಬದವರನ್ನು ಜಿಲ್ಲಾಡಳಿತ ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ತಬ್ಲಿಘಿಗೆ ಹೋಗಿದ್ದ ವ್ಯಕ್ತಿಯ ಜೊತೆ ಸಂಪರ್ಕದಲ್ಲಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು.

7. ರೋಗಿ 205:
ರಾಜ್ಯದಲ್ಲಿ ಕೊರೊನಾ ವೈರಸ್‍ಗೆ ಏಪ್ರಿಲ್ 13ರಂದು ವ್ಯಕ್ತಿ ಮೃತಪಟ್ಟಿದ್ದರು. ದೇಶದಲ್ಲೇ ಮೊದಲ ಕೊರೊನಾ ಸಾವು ಸಂಭವಿಸಿದ್ದ ಕಲಬುರಗಿಯಲ್ಲಿಯೇ ಮೂರನೇ ವ್ಯಕ್ತಿ ಕೊರೊನಾಗೆ ಬಲಿಯಾಗಿದ್ದರು. ಕೊರೊನಾ ಪೀಡಿತ 55 ವರ್ಷದ ವ್ಯಕ್ತಿ ರೋಗಿ ಸಂಖ್ಯೆ-205 ಸೋಮವಾರ ಕಲಬುರಗಿ ನಗರದ ಇಎಸ್‍ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಮೃತ ವ್ಯಕ್ತಿ ಕಲಬುರಗಿ ನಗರದ ಮೋಮಿನಪುರ ಬಡಾವಣೆಯ ನಿವಾಸಿಯಾಗಿದ್ದು, ಅವರಿಗೆ ಪಕ್ಕದ ಮನೆಯಲ್ಲಿ ದೆಹಲಿಯ ತಬ್ಲಿಘಿ ಸಮಾವೇಶಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಡನೆ ಸಂಪರ್ಕವಿತ್ತು. ಅವರು ಏಪ್ರಿಲ್ 10ರಂದು ಮೃತ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದರು.

ಕಲಬುರಗಿಯ ಖಾಸಗಿ ಆಸ್ಪತ್ರೆ ಎರಡು ದಿನಗಳ ಕಾಲ ರೋಗಿಯನ್ನು ಇಟ್ಟುಕೊಂಡು ಈ ಬಗ್ಗೆ ಸರ್ಕಾರಿ ಆಸ್ಪತ್ರೆಗೆ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಎರಡು ದಿನಗಳ ಬಳಿಕ ಅಲ್ಲಿಂದ ಇಎಸ್‍ಐ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಸಾವನ್ನಪ್ಪಿದ್ದರು. ಆಗ ಸ್ಯಾಂಪಲ್ ತೆಗೆದುಕೊಂಡಿದ್ದು, ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ಈಗ ಆಸ್ಪತ್ರೆಗೆ ಬೀಗ ಹಾಕಲಾಗಿದ್ದು ಸಿಬ್ಬಂದಿಯನ್ನು ಕ್ವಾರಂಟೈನ್‍ನಲ್ಲ ಇಡಲಾಗಿದೆ.

8. ರೋಗಿ 252:
ಬೆಂಗಳೂರಿ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ 65 ವರ್ಷದ ವೃದ್ಧ ಸಾವನ್ನಪ್ಪಿದ್ದರು. ವೃದ್ಧ ಭಾನುವಾರವಷ್ಟೇ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಪಟ್ಟಿದ್ದರು. ಇವರು ಹೃದ್ರೋಗದ ಸಮಸ್ಯೆಯಿಂದಲೂ ಬಳಲುತ್ತಿದ್ದರು. ಪ್ರತ್ಯೇಕ ಚಿಕಿತ್ಸಾ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಕೊರೊನಾ ವೈರಸ್ ತಗುಲಿರುವ ಕುರಿತು ಪರೀಕ್ಷೆ ಮಾಡಲಾಗಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟಿದೆ.

9. ರೋಗಿ 257:
ವಿಜಯಪುರದಲ್ಲಿ 69 ವೃದ್ಧ ಕೊರೊನಾಗೆ ಏಪ್ರಿಲ್ 12ರಂದು ಬಲಿಯಾಗಿದ್ದರು. ಶನಿವಾರ ರಾತ್ರಿ ದಿಢೀರ್ ಆಗಿ ರಾಜ್ಯ ಸರ್ಕಾರ ನಗರದ ಚಪ್ಪರ ಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಲು ಸೂಚನೆ ನೀಡಿತ್ತು. ಕೂಡಲೇ ಜಿಲ್ಲಾಡಳಿತ ಚಪ್ಪರಬಂದ್ ಕಾಲೋನಿಯನ್ನು ಸೀಲ್‍ಡೌನ್ ಮಾಡಿ ಕಟ್ಟೆಚ್ಚರ ವಹಿಸಿತ್ತು. ಇದರ ಬೆನ್ನಲ್ಲೇ ಭಾನುವಾರ ಮಧ್ಯಾಹ್ನ ಈ ಚಪ್ಪರ ಬಂದ್ ಕಾಲೋನಿ ನಿವಾಸಿ 60 ವರ್ಷದ ವೃದ್ಧೆಗೆ ಕೊರೊನಾ ಸೋಂಕು ತಗುಲಿದ್ದನ್ನು ರಾಜ್ಯ ಸರ್ಕಾರ ದೃಢಪಡಿಸಿತ್ತು. ಈ ಬೆನ್ನಲ್ಲೇ ವೃದ್ಧೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಪತಿ ಸೇರಿದಂತೆ ಒಟ್ಟು 24 ಮಂದಿಯ ಗಂಟಲ ದ್ರವದ ಮಾದರಿಯನ್ನು ತೆಗೆದುಕೊಂಡು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ರಾತ್ರಿ ಆಕೆಯ ಪತಿ(69) ಮೃತಪಟ್ಟಿದ್ದರು. ಮೃತಪಟ್ಟ ಸಂದರ್ಭದಲ್ಲಿ ಕೊರೊನಾ ಇರುವುದು ದೃಢಪಟ್ಟಿರಲಿಲ್ಲ. ಮಂಗಳವಾರ ಸರ್ಕಾರ ಅಧಿಕೃತವಾಗಿ ಕೊರೊನಾದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *