ವಿಧಾನ ಪರಿಷತ್‌ನಲ್ಲಿ ಸಹಕಾರಿ ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡಿದ ದೋಸ್ತಿಗಳು

Public TV
2 Min Read

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಕಾಯ್ದೆಯು ವಿಧಾನ ಪರಿಷತ್‌ನಲ್ಲಿ ತಿರಸ್ಕೃತವಾಗಿದೆ. ಈ ಮೂಲಕ ಕಾಯ್ದೆ ಅನುಮೋದನೆ ನಿರೀಕ್ಷೆಯಲ್ಲಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗವಾಗಿದೆ. ಬಿಲ್ ಸೋಲಿಸಿ ಸರ್ಕಾರಕ್ಕೆ ಮುಖಭಂಗ ಮಾಡುವಲ್ಲಿ ದೋಸ್ತಿಗಳು ಯಶಸ್ವಿಯಾಗಿದ್ದಾರೆ.

ತಿದ್ದುಪಡಿ ವಿಧೇಯಕ ಕುರಿತಂತೆ ಕಲಾಪದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಒಂದು ಗಂಟೆಗಳ ಕಾಲ ಚರ್ಚೆ ನಡೆಸಿದರು. ಕಾಯ್ದೆಯಲ್ಲಿ ಕೆಲವು ಅಂಶಗಳು ನ್ಯೂನತೆಯಿಂದ ಕೂಡಿದೆ. ಹೀಗಾಗಿ, ಇದನ್ನ ಸರಳೀಕರಣಗೊಳಿಸುವಂತೆ ವಿರೋಧ ಪಕ್ಷದ ಸದಸ್ಯರು ಒತ್ತಾಯಿಸಿದರು. ಆದರೆ, ಸರ್ಕಾರ ಒಪ್ಪದ ಕಾರಣ ಕಾಯ್ದೆಯ ಅಂಗೀಕಾರಕ್ಕೆ ಮತಕ್ಕೆ ಹಾಕುವಂತೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಮನವಿ ಮಾಡಿದರು. ಸಭಾಪತಿಗಳು ಮತಕ್ಕೆ ಹಾಕುವ ನಿರ್ಧಾರ ಕೈಗೊಂಡರು. ಇದನ್ನೂ ಓದಿ: ಸಿದ್ದರಾಮಯ್ಯ ನಮಗೆ ಸಿಎಂ ಅಲ್ಲ, ನಮಗೆ ಡಿಕೆಶಿಯೇ ಸಿಎಂ: ಅಶೋಕ್‌

ಮತದಾನ ಪ್ರಕ್ರಿಯೆಯಲ್ಲಿ ಬಿಲ್ ಪರ 23 ಮತಗಳು ಬಿದ್ದರೆ, ಬಿಲ್ ವಿರುದ್ಧ 26 ಮತಗಳು ಬಿದ್ದು ವಿಧೇಯಕಕ್ಕೆ ಸೋಲಾಯ್ತು.

ಬಿಲ್ ವಿರೋಧಕ್ಕೆ ಕಾರಣ ಏನು?
* ಪ್ರಕರಣ 2 (ಜೆಡ್) ಹಾಗೂ ಪ್ರಕರಣ 17ಬಿ ಸೇರ್ಪಡೆ ಮೂಲಕ ಪ್ರತಿಯೊಂದು ಸಹಕಾರಿಯು ತನ್ನ ಠೇವಣಿಯ ಶೇ.20 ಅನ್ನು ದ್ರವ್ಯ ರೂಪದಲ್ಲಿ ಮೀಸಲಿಡುವ ಪ್ರಸ್ತಾವನೆ ಇದೆ.
* ಬಿಲ್ ಉದ್ದೇಶ ಸರಿ ಇದೆ. ಆದರೆ, ಇದನ್ನು ರಾಜ್ಯ ಶಾಸನಬದ್ಧ ಮೀಸಲು ದ್ರವ್ಯಾಸ್ತಿ ಎಂದು ನಿಗದಿಪಡಿಸಿರುವುದರಿಂದ, ಇದು ಸರ್ಕಾರದ ಆಸ್ತಿ ಎಂದು ಪರಿಗಣಿತವಾಗುತ್ತದೆ. ಇದು ಸರಿಯಲ್ಲ.
* ಆದ್ದರಿಂದ ಇದನ್ನು ಸಹಕಾರಿಯ ಶಾಸನಬದ್ಧ ದ್ರವ್ಯಾಸ್ತಿ ಎಂದು ಬದಲಾಯಿಸುವುದು ಸೂಕ್ತ.
* ಪ್ರತಿಯೊಂದು ಸಹಕಾರಿಯೂ ಸಹ ರಿಜಿಸ್ಟ್ರಾರನ ಪೂರ್ವಾನುಮತಿಯೊಂದಿಗೆ ಶೆಡ್ಯೂಲ್ ಬ್ಯಾಂಕಿನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
* ಇದು ಕಾಯ್ದೆಯ ಆಶಯಕ್ಕೂ ವಿರುದ್ಧ. ಆದ್ದರಿಂದ ‘ರಿಜಿಸ್ಟ್ರಾರನ ಪೂರ್ವಾನುಮತಿಯೊಂದಿಗೆ’ ಎಂಬುದನ್ನು ಕೈಬಿಡಬೇಕು.
* ಪ್ರಸ್ತುತ ಇರುವ ಕಲಂ 18 ಸರಿಯಾಗಿ ಇದೆ. ಒಂದು ವೇಳೆ ಬದಲಾಯಿಸುವುದಿದ್ದಲ್ಲಿ ಸರ್ಕಾರಿ ಭದ್ರತೆಗಳಲ್ಲಿ ಹಾಗೂ ಸಹಕಾರ ಬ್ಯಾಂಕುಗಳಲ್ಲಿ ಹೂಡಿಕೆಗೂ ಸಹ ಅವಕಾಶ ನೀಡುವುದು.
* ಪ್ರಕರಣ 26 (1ಎ) ಮೂಲಕ ಪ್ರತಿಯೊಬ್ಬ ಅಭ್ಯರ್ಥಿಯು ಅವನ/ಅವಳ ಹಾಗೂ ಕುಟುಂಬದ ಆಸ್ತಿ ಮತ್ತು ಹೊಣೆಗಾರಿಕೆಗಳ ಘೋಷಣೆ ಕಡ್ಡಾಯ ಮಾಡಿದ್ದು, ಚುನಾವಣೆಯ ಸಂದರ್ಭದಲ್ಲಿ ಹಾಗೂ ಪ್ರತಿ ಐದು ವರ್ಷಕ್ಕೊಮ್ಮೆ ಘೋಷಣೆ ಸರಿ ಇದೆ.
* ಪ್ರತಿ ವರ್ಷ ಘೋಷಣೆ ಪ್ರಾಯೋಗಿಕವಾಗಿ ಕಷ್ಟ/ಕಾರ್ಯಸಾಧುವಲ್ಲ. ಆದ್ದರಿಂದ ಇವುಗಳನ್ನು ಕೈಬಿಡುವುದು.
* ಪ್ರಕರಣ 33(1ಎ) ಸೇರ್ಪಡೆ ಮೂಲಕ ಪ್ರತಿ 3 ವರ್ಷಕ್ಕೊಮ್ಮೆ ಸಹಕಾರ ಲೆಕ್ಕಪರಿಶೋಧನಾ ನಿರ್ದೇಶಕರಿಂದ ಲೆಕ್ಕಪರಿಶೋಧನೆ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ಇದನ್ನ 5 ವರ್ಷಕ್ಕೆ ಮಾಡಬೇಕು.
* ರಾಜ್ಯದಲ್ಲಿ 50,000 ಕ್ಕೂ ಹೆಚ್ಚು ಸಹಕಾರ ಸಂಘ/ಸೌಹಾರ್ದ ಸಹಕಾರಿಗಳು ಇದ್ದು, ಪ್ರತಿವರ್ಷ 17,000 ಕ್ಕೂ ಹೆಚ್ಚು ಸಂಸ್ಥೆಗಳ ಲೆಕ್ಕಪರಿಶೋಧನೆ ಮಾಡುವುದು ಪ್ರಾಯೋಗಿಕವಾಗಿ ಕಷ್ಟ/ಕಾರ್ಯಸಾಧುವಲ್ಲ. ಇದು ಕಾಯ್ದೆಯ ಆಶಯಕ್ಕೂ ವಿರುದ್ಧ. ಆದ್ದರಿಂದ ಇದನ್ನು ಕೈಬಿಡಬೇಕು.

Share This Article