ಬೆಂಗಳೂರು: ಸಿಎಂ ಅವರು ಗುರುವಾರ ಸದಸನದಲ್ಲಿ ವಿಶ್ವಾಸ ಮತ ಯಾಚಿಸಲಿದ್ದಾರೆ. ಆದರೆ ಅವರು ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ ಅತೃಪ್ತ ಶಾಸಕರ ಸುಪ್ರೀಂ ತೀರ್ಪು ವಿಚಾರದ ಕುರಿತು ಪ್ರತಿಕ್ರಿಯಿಸಿ, ಇಂದು 10.30 ಕ್ಕೆ ಸುಪ್ರೀಂಕೋರ್ಟ್ ನಿಂದ ತೀರ್ಪು ಬರಲಿದೆ. ಕೋರ್ಟ್ ತೀರ್ಪು ಏನಾಗುತ್ತದೆ ಎಂದು ನಾವೂ ಕಾದು ನೋಡುತ್ತಿದ್ದೇವೆ. ಇದರಿಂದ ರಾಜಕೀಯ ವಿಚಾರದಲ್ಲಿ ಏನು ಅನ್ನೋದು ಸ್ಪಷ್ಟ ಆಗುತ್ತದೆ ಎಂದು ತಿಳಿಸಿದರು.
ನಾಳೆ ಸದನದಲ್ಲಿ ಮುಖ್ಯಮಂತ್ರಿ ವಿಶ್ವಾಸಮತ ಯಾಚಿಸಲಿದ್ದಾರೆ. ನನಗೆ ವಿಶ್ವಾಸವಿದೆ ಅದರಲ್ಲಿ ಸಿಎಂ ವಿಶ್ವಾಸ ಕಳೆದುಕೊಳ್ಳುತ್ತಾರೆ. ನಮಗೆ ಜಯ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮೈತ್ರಿ ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯಾಗಿರೋ ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಸಂಬಂಧಿತ ತೀರ್ಪನ್ನು ಇಂದು ಸುಪ್ರೀಂಕೋರ್ಟ್ ನೀಡಲಿದೆ. ಮಂಗಳವಾರ ಸುದೀರ್ಘ ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟಿಸಲಿದೆ.